ಬೆಂಗಳೂರು:ಸೋಮವಾರದಿಂದ ವಿಧಾನ ಮಂಡಲ ಅಧಿವೇಶನ ಆರಂಭಗೊಳ್ಳುತ್ತಿದೆ. ಅಷ್ಟರಲ್ಲಿ ವಿಧಾನ ಪರಿಷತ್ತಿಗೆ ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡುವ ಅನಿವಾರ್ಯತೆ ಬಿಜೆಪಿಗೆ ಎದುರಾಗಿದೆ. ಆಡಳಿತ ಪಕ್ಷದಿಂದ ಪ್ರತಿಪಕ್ಷದ ಸಾಲಿಗೆ ಬಂದು ಆರು ತಿಂಗಳ ಕಾಲ ಉಭಯ ಸದನಗಳ ಪ್ರತಿಪಕ್ಷ ನಾಯಕನ ನೇಮಿಸಲು ವಿಳಂಬ ಮಾಡಿದ್ದ ಬಿಜೆಪಿಗೆ ಈಗ ಮತ್ತೊಮ್ಮೆ ಲೋಕಸಮರದ ನಂತರ ಮೇಲ್ಮನೆಯಲ್ಲಿ ಅಂತಹದ್ದೇ ಸನ್ನಿವೇಶ ಎದುರಾಗಿದೆ.
ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕರಾಗಿದ್ದ ಕೋಟಾ ಶ್ರೀನಿವಾಸ ಪೂಜಾರಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕನ ಸ್ಥಾನ ತೆರವಾಗಿದೆ. ವರ್ಷದ ಹಿಂದೆಯೂ ಈ ಸ್ಥಾನವನ್ನು ಖಾಲಿಯಾಗಿಟ್ಟೇ ಎರಡು ಅಧಿವೇಶನ ಮುಗಿಸಿದ್ದ ಬಿಜೆಪಿ ಈಗ ಮತ್ತೊಮ್ಮೆ ಅಂತಹದ್ದೇ ಸ್ಥಿತಿ ಎದುರಿಸುವಂತಾಗಿದೆ. 2023ರ ಮೇ ತಿಂಗಳಿನಲ್ಲಿಯೇ ಕಾಂಗ್ರೆಸ್ ಸರ್ಕಾರ ರಚಿಸಿದರೂ ಬಿಜೆಪಿಗೆ ಪ್ರತಿಪಕ್ಷದ ನಾಯಕನ ಆಯ್ಕೆ ಮಾಡಲು ಆರು ತಿಂಗಳು ಬೇಕಾಯಿತು. ನವೆಂಬರ್ನಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಮತ್ತು ಡಿಸೆಂಬರ್ನಲ್ಲಿ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡಿತು. ಏಳು ತಿಂಗಳಿನಲ್ಲಿಯೇ ಮತ್ತೊಮ್ಮೆ ಪರಿಷತ್ ಪ್ರತಿಪಕ್ಷದ ನಾಯಕನ ಸ್ಥಾನ ಖಾಲಿಯಾಗಿದ್ದು ಯಾರನ್ನು ನೇಮಿಸಬೇಕು ಎನ್ನುವ ಗೊಂದಲ ಪಕ್ಷದಲ್ಲಿದೆ.
ರವಿಕುಮಾರ್ಗೆ ಸ್ಥಾನ?:ಸದ್ಯ ಪರಿಷತ್ ಪ್ರತಿಪಕ್ಷದ ಸಚೇತಕರಾಗಿರುವ ರವಿಕುಮಾರ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇವರ ಜೊತೆ ಹಿರಿಯ ನಾಯಕರ ಸಿ.ಟಿ.ರವಿ ಕೂಡ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದು, ಪ್ರತಿಪಕ್ಷದ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇವರ ಜೊತೆ ಮತ್ತೋರ್ವ ನಾಯಕ ಚಲವಾದಿ ನಾರಾಯಣಸ್ವಾಮಿಯೂ ಆಕಾಂಕ್ಷಿಯಾಗಿದ್ದಾರೆ. ಪಕ್ಷದ ಬಹುತೇಕ ಎಂಎಲ್ಸಿಗಳಿಗೆ ರವಿಕುಮಾರ್ ಹೆಸರಿನ ಪರವಾಗಿದ್ದಾರೆ. ಸಂಘ, ಪಕ್ಷ ಮತ್ತು ಯಡಿಯೂರಪ್ಪ ಈ ರೀತಿ ಎಲ್ಲ ಆಯಾಮದಲ್ಲಿಯೂ ಸಲ್ಲುವ ವ್ಯಕ್ತಿ ರವಿಕುಮಾರ್ ಆಗಿದ್ದಾರೆ. ಅನುಭವಿ, ಉತ್ತಮ ಸಂಘಟಕ, ಪಕ್ಷಕ್ಕೆ ಸಲ್ಲಿಸಿರುವ ಸೇವೆ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ವ್ಯಕ್ತಿಯೂ ಆಗಿರುವ ಹಿನ್ನೆಲೆಯಲ್ಲಿ ರವಿಕುಮಾರ್ ಅವರನ್ನೇ ಪ್ರತಿಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.
ಹೈಕಮಾಂಡ್ ತಂತ್ರವೇನು?:ವಿಧಾನಸಭಾ ಚುನಾವಣೆಯಲ್ಲಿ ಪರಾಜಿತಗೊಂಡಿದ್ದ ಸಿ.ಟಿ.ರವಿ ಅವರನ್ನು ಪರಿಷತ್ಗೆ ಆಯ್ಕೆ ಮಾಡಿ ಕಳುಹಿಸಲಾಗಿದೆ. ಇದರ ಹಿಂದೆ ಪರಿಷತ್ ಪ್ರತಿಪಕ್ಷದ ನಾಯಕನ ಸ್ಥಾನ ನೀಡುವ ಕಾರಣವಿದೆ ಎನ್ನುವ ಮಾತುಗಳು ಪಕ್ಷದ ಪಡಸಾಲೆಯಲ್ಲಿ ಕೇಳಿಬರುತ್ತಿವೆ. ಆದರೆ, ವಿಧಾನಸಭೆ ಪ್ರತಿಪಕ್ಷದ ನಾಯಕ ಅಶೋಕ್ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು ಪರಿಷತ್ನಲ್ಲಿಯೂ ಅದೇ ಸಮುದಾಯಕ್ಕೆ ನೀಡುವ ಸಾಧ್ಯತೆ ಕಡಿಮೆ. ಒಂದು ವೇಳೆ ಅಶೋಕ್ ಅವರನ್ನು ಪ್ರತಿಪಕ್ಷದ ನಾಯಕನ ಸ್ಥಾನದಿಂದ ತೆರವುಗೊಳಿಸಿ ಬೇರೆ ಜವಾಬ್ದಾರಿ ವಹಿಸುವ ಸಂದರ್ಭ ಬಂದಲ್ಲಿ ಆಗ ಸಿ.ಟಿ.ರವಿ ಹೆಸರು ಪರಿಷತ್ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡುವುದು ಬಹುತೇಕ ಖಚಿತ. ಆದರೆ, ಸದ್ಯದ ಮಟ್ಟಿಗೆ ಈಗ ಅಂತಹ ಸ್ಥಿತಿ ಇಲ್ಲ. ಸದ್ಯ ಸರ್ಕಾರದ ಹಗರಣಗಳ ಹೋರಾಟದ ವಿಚಾರ ವಿಷಯಾಂತರವಾಗಬಾರದು ಎನ್ನುವ ಕಾರಣಕ್ಕೆ ಬಿಜೆಪಿ ಹೈಕಮಾಂಡ್ ಶಾಸಕಾಂಗ ಪಕ್ಷದ ನಾಯಕರ ಬದಲಾವಣೆಗೆ ಕೈಹಾಕಲ್ಲ ಎನ್ನಲಾಗುತ್ತಿದೆ.
ಮುಂಚೂಣಿಯಲ್ಲಿ ಸಿ.ಟಿ.ರವಿ:ಸಿ.ಟಿ.ರವಿ ಉತ್ತಮ ವಾಗ್ಮಿ, ಪಕ್ಷದ ನಿಷ್ಟಾವಂತ ಕಾರ್ಯಕರ್ತ. ಯಡಿಯೂರಪ್ಪ ಸಂಪುಟದಲ್ಲಿದ್ದಾಗ ಸಂಘಟನೆಗೆ ಬರುವಂತೆ ಪಕ್ಷ ನೀಡಿದ್ದ ನಿರ್ದೇಶನ ಪಾಲಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿ ವಹಿಸಿಕೊಂಡಿದ್ದವರು. ಪಕ್ಷದ ಶಿಸ್ತಿನ ಸಿಪಾಯಿ, ಕ್ರಿಯಾಶೀಲತೆ, ರಾಜಕೀಯ ಅನುಭವದ ಆಧಾರದಲ್ಲಿ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವ ಚಾಕಚಕ್ಯತೆ ಇರುವ ಹಿನ್ನೆಲೆಯಲ್ಲಿ ಸಿ.ಟಿ.ರವಿ ಬಿಜೆಪಿಗೆ ಉತ್ತಮ ಆಯ್ಕೆಯಾದರೆ ಒಕ್ಕಲಿಗ ಸಮುದಾಯಕ್ಕೇ ಉಭಯ ಸದನಗಳಲ್ಲಿಯೂ ವಿರೋಧ ಪಕ್ಷದ ನಾಯಕನ ಸ್ಥಾನ ನೀಡಲು ಕಷ್ಟಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಸದ್ಯದ ಮಟ್ಟಿಗೆ ಸಿ.ಟಿ.ರವಿಗೆ ಅವಕಾಶ ಸಿಗುವುದು ಅನುಮಾನ ಎನ್ನಲಾಗುತ್ತಿದೆ.
ಇನ್ನು ಚಲವಾದಿ ನಾರಾಯಣಸ್ವಾಮಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿಕೊಂಡು ದಲಿತ ಸಮುದಾಯಗಳ ಪರ ಧ್ವನಿ ಎತ್ತಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಸದನದಲ್ಲಿಯೂ ದಲಿತ ಪರ ದನಿಯಾಗಿ ಕೆಲಸ ಮಾಡಿದ್ದಾರೆ. ಆದರೆ ಇಷ್ಟು ಮಾತ್ರದಿಂದಲೇ ಅವಕಾಶ ಸಿಗುವುದು ಅನುಮಾನವಾಗಿದೆ. ಅವರಿಂದ ಇನ್ನಷ್ಟು ಸೇವೆಯ ನಿರೀಕ್ಷೆಯಲ್ಲಿ ಪಕ್ಷವಿದೆ ಎಂದು ಬಿಜೆಪಿ ನಾಯಕರೇ ಹೇಳುತ್ತಾರೆ.