ಬೆಂಗಳೂರು: "ಈ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಕರ್ನಾಟಕ ರಾಜ್ಯದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಬಂಡವಾಳ ಹೂಡಿಕೆ ವಿಚಾರದಲ್ಲಿ ಕರ್ನಾಟಕ ದೇಶದ ಇತರ ನಗರಗಳ ಜೊತೆ ಸ್ಪರ್ಧೆ ಮಾಡುತ್ತಿಲ್ಲ. ಬದಲಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡುತ್ತಿದೆ" ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕ-2025 ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಕಳೆದ ನಾಲ್ಕು ದಿನಗಳಲ್ಲಿ ಈ ಸಮಾವೇಶದಲ್ಲಿ ಅನೇಕ ಒಪ್ಪಂದಗಳು, ಚರ್ಚೆಗಳು ನಡೆದಿವೆ. ನೀವೆಲ್ಲರೂ ಕರ್ನಾಟಕ ರಾಜ್ಯದಲ್ಲಿ ಸೋಲುವ ಮಾತಿಲ್ಲ. ಹೀಗಾಗಿ ಈ ರಾಜ್ಯದ ಮೇಲೆ ನೀವು ವಿಶ್ವಾಸವಿಡಬಹುದು. ಈ ರಾಜ್ಯಕ್ಕೆ ಬಂದವರು ಬರಿಗೈಯಲ್ಲಿ ಹೋಗುವುದಿಲ್ಲ. ಈ ಸಮಾವೇಶದಲ್ಲಿ ಭಾಗವಹಿಸಿದ ಸಜ್ಜನ್ ಜಿಂದಾಲ್, ಆನಂದ್ ಮಹೀಂದ್ರಾ ಅವರ ಮಾತು ಕೇಳಿದ್ದೀರಿ. ಅವರ ಯೋಶೋಗಾಥೆ ಕೇಳಿದ್ದೀರಿ. ಇವರ ಮಾತು ಕೇಳಿದ ನಂತರ ವಿಶ್ವ ಭಾರತವನ್ನು ಬೆಂಗಳೂರು ಹಾಗೂ ಕರ್ನಾಟಕದ ಮೂಲಕ ನೋಡುತ್ತಿದೆ" ಎಂದು ತಿಳಿಸಿದರು.
"ನಿಮ್ಮ, ಕರ್ನಾಟಕ ರಾಜ್ಯ ಹಾಗೂ ದೇಶದ ಭವಿಷ್ಯಕ್ಕಾಗಿ ನೀವು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಬೇಕು. ಇದು ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿ ಮಾತ್ರವಲ್ಲ ಬೆಂಗಳೂರಿನ ಹೊರತಾಗಿ ಪ್ರಗತಿ ಸಾಧಿಸಲು ನಾವು ಗುರಿ ಹೊಂದಿದ್ದೇವೆ. ನಮ್ಮ ರಾಜ್ಯದಲ್ಲಿ ಏರೋಸ್ಪೇಸ್ ಕ್ಷೇತ್ರದಲ್ಲಿ ನಮ್ಮ ಎಂಎಸ್ಎಂಇಗಳು ದೊಡ್ಡ ಶಕ್ತಿ ತುಂಬುತ್ತಿವೆ. ಬಾಹ್ಯಾಕಾಶ ಕ್ಷೇತ್ರದ ಸಾಧನೆಗೆ ರಾಕೆಟ್ಗಳನ್ನು ನಮ್ಮ ಪೀಣ್ಯ ಕೈಗಾರಿಕಾ ಪ್ರದೇಶದಲ್ಲೇ ತಯಾರು ಮಾಡಿದ್ದೆವು" ಎಂದರು.
"ನೆಹರೂ ಅವರ ಕಾಲದಿಂದ ದೊಡ್ಡ ಕೈಗಾರಿಕೆಗಳು ಆರಂಭವಾಗಿ ದೊಡ್ಡ ಮಟ್ಟಕ್ಕೆ ಬೆಳೆದಿವೆ. ದೇಶದ ದೊಡ್ಡ ಕಂಪನಿಗಳು ನಮ್ಮ ರಾಜ್ಯದ ನೀತಿಗಳು, ಸ್ನೇಹ ಸಂಬಂಧವನ್ನು ಮೆಚ್ಚಿ ನಮ್ಮ ರಾಜ್ಯಕ್ಕೆ ಬಂದಿದ್ದಾರೆ. ನಾವೆಲ್ಲರೂ ಒಟ್ಟಾಗಿ ಸೇರಿ ಭವಿಷ್ಯದತ್ತ ಹೆಜ್ಜೆ ಹಾಕೋಣ. ಈ ಸಮಾವೇಶದ ಮೂಲಕ ರಾಜ್ಯಕ್ಕೆ 10 ಲಕ್ಷ ಕೋಟಿ ಗುರಿ ಹೊಂದಿದೆ. ನಮ್ಮ ನೂತನ ಕೈಗಾರಿಕಾ ನೀತಿಯು ಬೆಂಗಳೂರಿನ ಹೊರತಾಗಿ ರಾಜ್ಯದ ಇತರ ಪ್ರದೇಶಗಳಲ್ಲಿ ಬಂಡವಾಳ ಹೂಡಿಕೆ ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಿದೆ" ಎಂದು ಭರವಸೆ ನೀಡಿದರು.