ಕರ್ನಾಟಕ

karnataka

ETV Bharat / state

ಕೇಂದ್ರ ರಸ್ತೆ ನಿಧಿ ಕಾಯ್ದೆ ಉಲ್ಲಂಘಿಸಿ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಆರೋಪ: ಜುಲೈ 18ಕ್ಕೆ ಅರ್ಜಿ ವಿಚಾರಣೆ - High Court - HIGH COURT

ಸೆಸ್ ಸಂಗ್ರಹ ಮಾಡುತ್ತಿದ್ದರೂ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಸಂಗ್ರಹ ಮಾಡುತ್ತಿರುವುದು ಕಾನೂನು ಬಾಹಿರ ಎಂದು ಸಲ್ಲಿಸಲಾದ ಅರ್ಜಿಯ ವಿಚಾರಣೆಗೆ ಹೈಕೋರ್ಟ್​ ಪರಿಗಣಿಸಿದೆ.

High Court
ಹೈಕೋರ್ಟ್ (ETV Bharat)

By ETV Bharat Karnataka Team

Published : Jul 3, 2024, 9:52 PM IST

ಬೆಂಗಳೂರು: ಕೇಂದ್ರ ರಸ್ತೆ ನಿಧಿ ಕಾಯ್ದೆ-2000 ಜಾರಿಗೆ ಬಂದ ನಂತರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಮಾಡುವುದು ಕಾನೂನು ಬಾಹಿರ ಎಂದು ಹೇಳಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಜುಲೈ 18ಕ್ಕೆ ಮುಂದೂಡಿದೆ. ವಕೀಲೆ ಗೀತಾ ಮಿಶ್ರಾ ಎಂಬುವರು 2019ರಲ್ಲಿ ಸಲ್ಲಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠದ ವಿಚಾರಣೆ ಮುಂದೂಡಿತು.

ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ ವಾದ ಮಂಡಿಸಿ, ಕೇಂದ್ರ ರಸ್ತೆ ನಿಧಿ ಕಾಯ್ದೆ-2000 ಜಾರಿಗೆ ಬಂದ ನಂತರ ವಾಹನಗಳಲ್ಲಿ ಬಳಕೆ ಮಾಡಲಾಗುವ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಸೆಸ್ ವಿಧಿಸಲಾಗುತ್ತದೆ. ವಾಹನಗಳಿಂದ ಸಂಗ್ರಹಿಸಲಾಗುವ ಆ ಸೆಸ್ ಹಣವನ್ನು ರಾಜ್ಯ ಮತ್ತು ರಾಷ್ಟ್ರೀಯ ರಸ್ತೆಗಳು ಹಾಗೂ ಹೆದ್ದಾರಿಗಳ ಅಭಿವೃದ್ಧಿಗೆ ಮತ್ತು ನಿರ್ವಹಣೆಗೆ ಬಳಕೆ ಮಾಡಲಾಗುತ್ತದೆ. ಈವರೆಗೆ ಅಂದಾಜು 15 ಸಾವಿರ ಕೋಟಿ ರೂ. ಸೆಸ್ ಸಂಗ್ರಹವಾಗಿದೆ ಎಂದು ಹೇಳಲಾಗಿದೆ. ಆದರೆ, ಆ ಹಣ ಎಲ್ಲಿಗೆ ಹೋಗಿದೆ?, ಯಾವುದಕ್ಕೆ ಬಳಕೆ ಆಗಿದೆ? ಎಂಬ ಮಾಹಿತಿ ಇಲ್ಲ. ಸೆಸ್ ಸಂಗ್ರಹ ಮಾಡುತ್ತಿದ್ದರೂ, ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಸಂಗ್ರಹ ಮಾಡಲಾಗುತ್ತಿದೆ. ಇದು ಕಾನೂನು ಬಾಹಿರ ಮತ್ತು ಸಂವಿಧಾನ ಬಾಹಿರ ಎಂದು ಹೇಳಿದರು.

2019ರಲ್ಲಿ ಅರ್ಜಿ ಸಲ್ಲಿಕೆಯಾಗಿದ್ದರೂ ಸಂಬಂಧಪಟ್ಟ ಇಲಾಖೆ, ಪ್ರಾಧಿಕಾರಿಗಳಿಂದ ಸೂಕ್ತ ಸ್ಪಂದನೆ ದೊರಕುತ್ತಿಲ್ಲ. ಆದ್ದರಿಂದ ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಬೇಕು ಎಂದು ವಕೀಲರು ಮನವಿ ಮಾಡಿದರು. ಇದನ್ನು ಪರಿಗಣಿಸಿದ ನ್ಯಾಯ ಪೀಠವು ವಿಚಾರಣೆಯನ್ನು ಜುಲೈ 18ಕ್ಕೆ ನಿಗದಿಪಡಿಸಿತು.

ಕೇಂದ್ರ ರಸ್ತೆ ನಿಧಿ ಕಾಯ್ದೆ-2000 ಹಾಗೂ ನಿಯಮಗಳು-2007 ಜಾರಿಗೆ ಬಂದ ಹಿನ್ನೆಯಲ್ಲಿ ರಸ್ತೆಯ ಬಳಕೆದಾರರಿಂದ ಶುಲ್ಕ, ಟೋಲ್ ಸಂಗ್ರಹಿಸಲು ಅವಕಾಶವಿರುವ ರಾಷ್ಟ್ರೀಯ ಹೆದ್ದಾರಿ ಕಾಯ್ದೆ-1956ರ ಸೆಕ್ಷನ್ 8, ರಾಷ್ಟ್ರೀಯ ಹೆದ್ದಾರಿ ನಿಯಮಗಳು-1957, ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳ ನಿರ್ಧಾರ ಮತ್ತು ಸಂಗ್ರಹ) ನಿಯಮಗಳು-2008 ಇವುಗಳನ್ನು ಸಂವಿಧಾನ ಬಾಹಿರ ಮತ್ತು ಕಾನೂನು ಬಾಹಿರ ಎಂದು ಘೋಷಿಸಬೇಕು. ಅರ್ಜಿ ಇತ್ಯರ್ಥ ಆಗುವ ತನಕ ಟೋಲ್ ಪ್ಲಾಜಾಗಳಲ್ಲಿ ಟೋಲ್ ಸಂಗ್ರಹ ಮಾಡದಂತೆ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ಬಂಧವಿಧಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಇದನ್ನೂ ಓದಿ:ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರ: ಜು.5ರ ವರೆಗೆ ಭಾರೀ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ABOUT THE AUTHOR

...view details