ಬೆಂಗಳೂರು: ಅಮೆರಿಕ ನ್ಯಾಯಾಲಯದ ಆದೇಶವನ್ನು ಪ್ರಸ್ತಾಪಿಸಿರುವ ಹೈಕೋರ್ಟ್, ಪೆಪ್ಪರ್ ಸ್ಪ್ರೇ ಅತ್ಯಂತ ಅಪಾಯಕಾರಿ ಆಯುಧವಾಗಿದೆ ಎಂದು ಸಿ.ಕೃಷ್ಣಯ್ಯ ಚೆಟ್ಟಿ ಆ್ಯಂಡ್ ಸನ್ಸ್ ಕಂಪನಿ (ಸಿಕೆಸಿ ಆ್ಯಂಡ್ ಸನ್ಸ್ ಕಂಪನಿ) ಚಿನ್ನಾಭರಣಗಳ ಮಳಿಗೆ ನಿರ್ದೇಶಕರಲ್ಲಿ ಒಬ್ಬರಾದ ಸಿ.ಗಣೇಶ್ ನಾರಾಯಣ ಮತ್ತವರ ಪತ್ನಿ ವಿದ್ಯಾ ನಟರಾಜ್ ವಿರುದ್ಧದ ಕ್ರಿಮಿನಲ್ ಪ್ರಕರಣದ ತನಿಖೆ ರದ್ದುಗೊಳಿಸಲು ನಿರಾಕರಿಸಿದೆ.
ಪ್ರಕರಣವೇನು?: ಸಿಕೆಸಿ ಆ್ಯಂಡ್ ಸನ್ಸ್ ಕಂಪೆನಿಯ ಪಕ್ಕದ ನಿವೇಶನದ ಮಾಲೀಕ ವಿನೋದ್ ಹಯಗ್ರೀವಾ ಎಂಬವರು ತಮ್ಮ ಜಾಗದಲ್ಲಿ ಅತಿಕ್ರಮ ಪ್ರವೇಶ ಮಾಡದಂತೆ ನ್ಯಾಯಾಲಯದಿಂದ ಮಧ್ಯಂತರ ನಿರ್ಬಂಧಕಾಜ್ಞೆ ಪಡೆದುಕೊಂಡಿದ್ದರು. ಈ ನಡುವೆ 2023ರ ಏಪ್ರಿಲ್ ನಾಲ್ಕರಂದು ಉಂಟಾದ ಗಲಾಟೆ ವೇಳೆ ವಿದ್ಯಾ ಅವರು ಶಿವಾಜಿನಗರದಲ್ಲಿರುವ ಸಿಕೆಸಿ ಆ್ಯಂಡ್ ಸನ್ಸ್ ಮಳಿಗೆಯಲ್ಲಿನ ಭದ್ರತಾ ಸಿಬ್ಬಂದಿ ರಣದೀಪ್ ದಾಸ್ ಮೇಲೆ ಪೆಪ್ಪರ್ ಸ್ಪ್ರೇ ಬಳಕೆ ಮಾಡಿದ್ದರು. ಇದರಿಂದ ದಾಸ್, ವಿದ್ಯಾ ಮತ್ತು ಗಣೇಶ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಿ.ಗಣೇಶ್ ನಾರಾಯಣ ಮತ್ತು ಅವರ ಪತ್ನಿ ವಿದ್ಯಾ ನಟರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಂದು ನಡೆದ ಗಲಾಟೆಯಲ್ಲಿ ತನ್ನನ್ನು ರಕ್ಷಣೆ ಮಾಡಿಕೊಳ್ಳುವುದಕ್ಕಾಗಿ ಪೆಪ್ಪರ್ ಸ್ಪ್ರೇ ಬಳಕೆ ಮಾಡಿಕೊಳ್ಳಲಾಗಿದೆ. ಐಪಿಸಿ ಸೆಕ್ಷನ್ 100ರ ಪ್ರಕಾರ ಸ್ವಯಂ ರಕ್ಷಣೆ ಮಾಡಿಕೊಳ್ಳುವುದು ಹಕ್ಕಾಗಿದೆ. ಆದ್ದರಿಂದ ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.