ಕರ್ನಾಟಕ

karnataka

ETV Bharat / state

ಮಾಜಿ ಶಾಸಕ ಲಿಂಗೇಶ್ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್​ ನಿರಾಕರಣೆ - Former MLA Lingesh Case - FORMER MLA LINGESH CASE

ಜೆಡಿಎಸ್ ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಸೇರಿ 9 ಮಂದಿಯ ವಿರುದ್ಧ ಎಫ್‌ಐಆರ್​ ದಾಖಲಿಸುವಂತೆ ಕೋಲಾರದ ರಾಜಣ್ಣ ಎಂಬವರು ದೂರು ನೀಡಿದ್ದರು. ಇದನ್ನು ಪರಿಗಣಿಸಿದ ವಿಚಾರಣಾಧೀನ ನ್ಯಾಯಾಲಯ ಆರೋಪಿಗಳ ವಿರುದ್ಧ ಎಫ್​ಐಆರ್‌ಗೆ​ ಆದೇಶಿಸಿತ್ತು.

High Court
ಕರ್ನಾಟಕ ಹೈಕೋರ್ಟ್​ (ETV Bharat)

By ETV Bharat Karnataka Team

Published : Sep 18, 2024, 6:39 AM IST

ಬೆಂಗಳೂರು: ಬಗರ್‌ಹುಕುಂ ಸಾಗುವಳಿ ಭೂ ಮಂಜೂರಾತಿ ಅಕ್ರಮ ಆರೋಪ ಸಂಬಂಧ ಜೆಡಿಎಸ್ ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಸೇರಿ 9 ಮಂದಿಯ ವಿರುದ್ಧ ಹಾಸನ ಜಿಲ್ಲೆಯ ಬೇಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ರದ್ದುಪಡಿಸಲು ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ.

ಬಗರ್‌ಹುಕುಂ ಸಾಗುವಳಿ ಸಮಿತಿಯ ಮಾಜಿ ಅಧ್ಯಕ್ಷ ಕೆ.ಎಸ್.ಲಿಂಗೇಶ್ ಸೇರಿದಂತೆ ಸಮಿತಿ ಸದಸ್ಯರ ವಿರುದ್ಧದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿತು.

ಎಫ್‌ಐಆರ್‌ನಲ್ಲೇನಿದೆ?: ಬೇಲೂರು ತಾಲೂಕಿನಲ್ಲಿ 2,750 ಎಕರೆ ಭೂಮಿಯನ್ನು 1,430 ಮಂದಿ ನಕಲಿ ಮತ್ತು ಅಕ್ರಮ ಫಲಾನುಭವಿಗಳಿಗೆ ಹಂಚಲಾಗಿದೆ. ಬೇಲೂರು ತಾಲೂಕು ಬಗರ್‌ಹುಕುಂ ಸಾಗುವಳಿ ಸಮಿತಿ ಅಧ್ಯಕ್ಷರಾಗಿದ್ದ ಮೊದಲ ಆರೋಪಿ ಲಿಂಗೇಶ್ ಅವರು 750 ಎಕರೆಗಿಂತ ಹೆಚ್ಚಿನ ಪ್ರಮಾಣದ ಸರ್ಕಾರಿ ಜಮೀನುಗಳ ಅನುದಾನವನ್ನು ಅನುಮೋದಿಸಿದ್ದಾರೆ. ಆರೋಪಿಗಳೆಲ್ಲರೂ ಅಧಿಕಾರಿಗಳೊಂದಿಗೆ ಶಾಮೀಲಾಗಿ ತಮ್ಮ ಅಧಿಕಾರ ಮತ್ತು ಸ್ಥಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ನಕಲಿ ದಾಖಲೆ ಸೃಷ್ಟಿಸಲು ಸಹಕರಿಸುವ ಮೂಲಕ ಅಧಿಕಾರಿಗಳು ಭಾಗಿಯಾಗಿದ್ದು, ಸರ್ಕಾರಕ್ಕೆ ವಂಚಿಸುವ ಉದ್ದೇಶದಿಂದ ಅಪರಾಧಿಕ ಒಳಸಂಚು ನಡೆಸಿದ್ದಾರೆ. ಮಾಜಿ ಶಾಸಕ ವೈ.ಎನ್.ರುದ್ರೇಶ್ ಗೌಡ ಅವರೂ ಅಕ್ರಮ ವಹಿವಾಟಿನ ಭಾಗವಾಗಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಕೋಲಾರದ ರಾಜಣ್ಣ ಅವರ ಖಾಸಗಿ ದೂರು ಪರಿಗಣಿಸಿದ್ದ ವಿಚಾರಣಾಧೀನ ನ್ಯಾಯಾಲಯವು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶಿಸಿತ್ತು. ಇದರನುಸಾರ ದಾಖಲಾದ ಎಫ್‌ಐಆರ್ ರದ್ದತಿ ಕೋರಿ ಲಿಂಗೇಶ್ ಮತ್ತಿತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ:ವಿವಿಧ ರೀತಿಯ ತೆರಿಗೆಗಳ ಪಾವತಿಗೆ ಡಿಮ್ಯಾಂಡ್​ ನೋಟಿಸ್​ ಜಾರಿ : ಹೈಕೋರ್ಟ್ ಮೆಟ್ಟಿಲೇರಿದ ದಿನೇಶ್​ ​ ಗುಂಡೂರಾವ್​ - Gundurao moved to the High Court

ABOUT THE AUTHOR

...view details