ಬೆಂಗಳೂರು: ಮಂಡ್ಯ ಕೆಆರ್ಎಸ್ನಲ್ಲಿನ ಬೃಂದಾವನ ಗಾರ್ಡನ್ ಅನ್ನು ಡಿಸ್ನಿ ಲ್ಯಾಂಡ್ ಮಾದರಿ ಮೇಲ್ದರ್ಜೆಗೇರಿಸುವ ಯೋಜನೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಆ ಮೂಲಕ ಬೃಂದಾವನ ಉದ್ಯಾನವನಕ್ಕೆ ಹೊಸ ರೂಪ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಯೋಜನೆಯಡಿ ಕೃಷ್ಣರಾಜಸಾಗರ ಜಲಾಶಯದ ಕೆಳಭಾಗದಲ್ಲಿನ 198 ಎಕರೆ ಜಾಗದಲ್ಲಿ ಉದ್ಯಾನವನ ಸೌಂದರ್ಯೀಕರಣ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಒಟ್ಟು 4.5 ವರ್ಷಗಳ ನಿರ್ಮಾಣ ಅವಧಿಯನ್ನು ಒಳಗೊಂಡಿದ್ದು, ಅಂದಾಜು 2,663.74 ಕೋಟಿ ರೂ. ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ಮೇಲ್ದರ್ಜೆಗೇರಿಸುವ ಯೋಜನೆ ಇದಾಗಿದೆ.
198 ಎಕರೆ ಜಾಗದಲ್ಲಿರುವ ಬೃಂದಾವನ ಉದ್ಯಾನವನಕ್ಕೆ ನಿತ್ಯ 20,000 ಪ್ರವಾಸಿಗರು ಆಗಮಿಸುತ್ತಾರೆ. ರಾಜ್ಯದ ಪ್ರಮುಖ ಪ್ರವಾಸಿ ತಾಣದಲ್ಲಿ ಒಂದಾಗಿರುವ ಬೃಂದಾವನ ಉದ್ಯಾನವನವನ್ನು 3 ಹಂತಗಳಲ್ಲಿ ಮೇಲ್ದರ್ಜೆಗೇರಿಸುವ ಕಾಮಗಾರಿ ನಡೆಯಲಿದೆ. ಬೃಂದಾವನ ಉದ್ಯಾನವನವನ್ನು ಡಿಸ್ನಿ ಪಾರ್ಕ್ ಮಾದರಿ ಅಭಿವೃದ್ಧಿ ಪಡಿಸಲು ಯೋಜಿಸಲಾಗಿದೆ.
ಬೃಹತ್ ಕಾವೇರಿ ಪ್ರತಿಮೆ?:ವಿಶ್ವವಿಖ್ಯಾತ ಬೃಂದಾವನ ಉದ್ಯಾನದಲ್ಲಿ (ಕೆಆರ್‌ಎಸ್) 125 ಅಡಿ ಎತ್ತರದ ಬೃಹತ್ ಕಾವೇರಿ ಮಾತೆ ಪ್ರತಿಮೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಈ ಮುಂಚೆ ಡಿ.ಕೆ. ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದಾಗ ಬೃಹತ್ ಕಾವೇರಿ ಪ್ರತಿಮೆ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದರು. ಆದರೆ, ಅದಕ್ಕೆ ರೈತರು ಸೇರಿ ಹಲವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಆದರೆ ಇದೀಗ ರಾಜ್ಯ ಸರ್ಕಾರ ಮತ್ತೆ ಬೃಂದಾವನ ಉದ್ಯಾನವನ ಸೌಂದರ್ಯೀಕರಣಕ್ಕೆ ಮುಂದಾಗಿದ್ದು, ಬೃಹತ್ ಕಾವೇರಿ ಪ್ರತಿಮೆ ನಿರ್ಮಿಸಲು ಮುಂದಾಗಿದೆ. ಈ ಪ್ರತಿಮೆ ನಿರ್ಮಾಣಕ್ಕಾಗಿ 184 ಕೋಟಿ ರೂ. ಅಂದಾಜು ಮಾಡಲಾಗಿದೆ. ಕಾವೇರಿ ಪ್ರತಿಮೆಯ ಜೊತೆಗೆ ವಸ್ತು ಸಂಗ್ರಹಾಲಯವೂ ನಿರ್ಮಾಣ ಆಗಲಿದೆ. ಈ ಸಮುಚ್ಚಯದಲ್ಲಿ ಗೋಪುರಯುಕ್ತ ಗಾಜಿನ ಮನೆ, ವೀಕ್ಷಣೆ ಗೋಪುರ, ಬ್ಯಾಂಡ್ ಸ್ಟಾಂಡ್, ಒಳಾಂಗಣ ಕ್ರೀಡಾಂಗಣ ಮತ್ತು ಇತಿಹಾಸ ಪರಿಚಯಿಸುವ ಗ್ಯಾಲರಿಯೂ ಇರಲಿವೆ.