ಬೆಂಗಳೂರು:ಕಳೆದ ವರ್ಷವಷ್ಟೇ ಸಂಪುಟ ಸಚಿವರುಗಳಿಗೆ 33 ಹೊಸ ಕಾರುಗಳನ್ನು ಖರೀದಿಸಿದ್ದ ರಾಜ್ಯ ಸರ್ಕಾರ, ಇದೀಗ ರಾಜ್ಯದ 26 ಸಂಸದರಿಗೂ ಹೊಸ ಹೈ ಎಂಡ್ ಕಾರುಗಳನ್ನು ಖರೀದಿ ಮಾಡಿದೆ.
ಹೊಸ ಇನ್ನೊವಾ ಕ್ರಸ್ಟಾ ಹೈಬ್ರಿಡ್ ಕಾರುಗಳನ್ನು ರಾಜ್ಯದ ಸಂಸದರಿಗೆ ಖರೀದಿಸಲಾಗಿದೆ. ಈ ಹಿಂದೆ ರಾಜ್ಯ ಸರ್ಕಾರ 33 ಸಚಿವರುಗಳಿಗೆ ಹೊಸ ಇನ್ನೋವಾ ಕ್ರಿಸ್ಟಾ ಹೈ ಎಂಡ್ ಕಾರುಗಳನ್ನು ಖರೀದಿಸಿತ್ತು. ಒಂದು ಇನ್ನೋವಾ ಹೈಬ್ರಿಡ್ ಎಸ್ಯುವಿ ಕಾರಿಗೆ ಸುಮಾರು 30 ಲಕ್ಷ ರೂ. ವೆಚ್ಚವಾಗಿತ್ತು. ಆರ್ಥಿಕ ಹೊರೆಯ ಮಧ್ಯೆ 33 ಸಚಿವರುಗಳಿಗೆ ಹೊಸ ಕಾರು ಖರೀದಿಸಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಿತ್ತು.
ಹೊಸ ಕಾರುಗಳನ್ನು ಖರೀದಿಸಿದ್ದೇಕೆ?: ರಾಜ್ಯದ ಸಂಸದರಿಗೆ ರಾಜ್ಯ ಸರ್ಕಾರವೇ ಕಾರು ಖರೀದಿಸಿ ಕೊಡುತ್ತದೆ. ಹಳೆ ಕಾರುಗಳು ಗರಿಷ್ಠ ಮಿತಿಯಾದ 1 ಲಕ್ಷ ಕಿ.ಮೀ.ಗೂ ಅಧಿಕ ದೂರ ಕ್ರಮಿಸಿರುವುದರಿಂದ ನಿಯಮದ ಪ್ರಕಾರ ಹೊಸ ಕಾರು ಖರೀದಿಸಬೇಕಾಗಿದೆ. ನಿಯಮದಂತೆ 1 ಲಕ್ಷ ಕಿ.ಮೀ. ಸಂಚಾರ ಅಥವಾ 3 ವರ್ಷ ಬಳಕೆ ಯಾವುದು ಮೊದಲು ಅದರನ್ವಯ ಹೊಸ ಕಾರು ಖರೀದಿಸಲಾಗುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಹೊಸ ಕಾರು ಖರೀದಿ ಅನಿವಾರ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಸಂಸದರಿಗೆ ಹೊಸ ಕಾರು (ETV Bharat) ಪ್ರತಿ ಕಾರಿಗೆ ₹29 ಲಕ್ಷ: ಸಂಸದರಿಗೆ ಸರ್ಕಾರ ಖರೀದಿಸಿರುವ ಪ್ರತಿ ಕಾರಿಗೆ ಸುಮಾರು 29 ಲಕ್ಷ ರೂ. ವೆಚ್ಚವಾಗಿದೆ. ಆ ಮೂಲಕ 26 ಸಂಸದರ ಕಾರುಗಳಿಗೆ 7.54 ಕೋಟಿ ರೂ. ವೆಚ್ಚವಾಗಿದೆ.
ಹೊಸ ಕಾರು ಖರೀದಿಗೆ ಸಿಎಂ ಸಿದ್ದರಾಮಯ್ಯ ಅನುಮೋದನೆ ಬಳಿಕ ಹಣಕಾಸು ಇಲಾಖೆ ಹೊಸ ಕಾರು ಖರೀದಿಗೆ ಅನುಮತಿ ನೀಡಲಾಗಿದೆ ಎಂದು ಡಿಐಪಿಆರ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಖರೀದಿಸಲಾದ 26 ಕಾರುಗಳ ಪೈಕಿ 21 ಸಂಸದರಿಗೆ ಹಸ್ತಾಂತರ ಮಾಡಲಾಗಿದೆ. ಇನ್ನೂ 5 ಕಾರುಗಳನ್ನು ಸಂಸದರಿಗೆ ಹಸ್ತಾಂತರಿಸಬೇಕಾಗಿದೆ. ಅವುಗಳನ್ನು ಕುಮಾರ ಕೃಪಾ ಅತಿಥಿ ಗೃಹದಲ್ಲಿಡಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಈವರೆಗೆ ಯಾರಿಗೆಲ್ಲ ಹೊಸ ಕಾರು?:ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಸಂಸದರು ಹಾಗೂ ರಾಜ್ಯಸಭೆ ಸಂಸದರುಗಳಿಗೆ ಹೊಸ ಕಾರು ಖರೀದಿ ಮಾಡಲಾಗಿದೆ. ಸಂಸದರಾದ ಹೆಚ್.ಡಿ.ಕುಮಾರಸ್ವಾಮಿ, ಕುಮಾರ್ ನಾಯಕ್, ತೇಜಸ್ವಿ ಸೂರ್ಯ, ಕೋಟಾ ಶ್ರೀನಿವಾಸ ಪೂಜಾರಿ, ಸುನಿಲ್ ಭೋಸ್, ರಾಧಾಕೃಷ್ಣ, ಶ್ರೇಯಸ್ ಪಟೇಲ್, ಮಲ್ಲೇಶ್ ಬಾಬು, ರಾಜಶೇಖರ್ ಹಿಟ್ನಾಳ್, ಸಯ್ಯದ್ ನಾಸೀರ್ ಹುಸೇನ್, ರಮೇಶ್ ಜಿಗಜಣಗಿ, ಯದುವೀರ್ ಒಡೆಯರ್ಗೆ ಹೊಸ ಕಾರು ಖರೀದಿಸಲಾಗಿದೆ.
ಜೊತೆಗೆ, ಸುಧಾಮೂರ್ತಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಡಾ.ಕೆ.ಸುಧಾಕರ್, ಪ್ರಭಾ ಮಲ್ಲಿಕಾರ್ಜುನ, ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ವೈ.ರಾಘವೇಂದ್ರ, ಈ.ತುಕಾರಾಂ, ಪ್ರಿಯಾಂಕಾ ಜಾರಕಿಹೊಳಿ, ಬಸವರಾಜ್ ಬೊಮ್ಮಾಯಿ, ಬ್ರಿಜೇಶ್ ಚೌಟ, ಗೋವಿಂದ ಕಾರಜೋಳ, ಜಿ.ಸಿ.ಚಂದ್ರಶೇಖರ್ ಹಾಗೂ ಈರಣ್ಣ ಕಡಾಡಿ ಅವರಿಗೂ ಹೊಸ ಕಾರು ಖರೀದಿಸಲಾಗಿದೆ.
ಇದನ್ನೂ ಓದಿ:ಮಾಣಿಪ್ಪಾಡಿ ವರದಿಯಲ್ಲಿ ಕಾಂಗ್ರೆಸ್ಸಿಗರ ಬಗ್ಗೆ ಇದೆಯೇ ಹೊರತು ಬಿಜೆಪಿಗರ ಕುರಿತು ಅಲ್ಲ; ಸಿಎಂಗೆ ವಿಜಯೇಂದ್ರ ತಿರುಗೇಟು