ಬೆಂಗಳೂರು :ತೀವ್ರ ಕಸರತ್ತು ಹಾಗೂ ಪೈಪೋಟಿ ಬಳಿಕ ಕರ್ನಾಟಕದ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಎಐಸಿಸಿ ಪ್ರಕಟಿಸಿದೆ. ಉಳಿದಿರುವ ನಾಲ್ಕು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದೆ. ಕಗ್ಗಂಟಾಗಿರುವ ಕೋಲಾರ ಕ್ಷೇತ್ರದ ಟಿಕೆಟ್ ಘೋಷಿಸದೇ ಬಾಕಿ ಉಳಿಸಿಕೊಂಡಿದೆ. ಘೋಷಿಸಿದ ಮೂರು ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳಲ್ಲಿ ಹಾಲಿ ಸಚಿವ ಮತ್ತು ಮಾಜಿ ಸಚಿವರ ಪುತ್ರರಿಗೆ ಟಿಕೆಟ್ ನೀಡಲಾಗಿದೆ.
ಎಐಸಿಸಿ ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿ ಹೆಸರನ್ನು ಪ್ರಕಟಿಸಿದೆ. ನಾಲ್ಕು ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಆಕಾಂಕ್ಷಿಗಳು ತೀವ್ರ ಲಾಬಿ ನಡೆಸಿದ್ದರು. ಹೀಗಾಗಿ ಹೈಕಮಾಂಡ್ಗೆ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಇದೀಗ ಸಮಾಲೋಚನೆ, ಕೆಲ ಮನವೊಲಿಕೆಗಳ ಬಳಿಕ ಕಗ್ಗಂಟಾಗಿದ್ದ ನಾಲ್ಕು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಕಾಂಗ್ರೆಸ್ ಹೈಕಮಾಂಡ್ ಫೈನಲ್ ಮಾಡಿದೆ. ನಿರೀಕ್ಷೆಯಂತೆಯೇ ಚಾಮರಾಜನಗರದಿಂದ ಸುನಿಲ್ ಬೋಸ್, ಚಿಕ್ಕಬಳ್ಳಾಪುರದಿಂದ ರಕ್ಷಾ ರಾಮಯ್ಯ, ಬಳ್ಳಾರಿಯಿಂದ ಇ.ತುಕಾರಾಂಗೆ ಟಿಕೆಟ್ ನೀಡಲಾಗಿದೆ.
ಚಾಮರಾಜನಗರದಲ್ಲಿ ಸುನಿಲ್ ಬೋಸ್ಗೆ ಟಿಕೆಟ್: ಇತ್ತ ಚಾಮರಾಜನಗರ ಕ್ಷೇತ್ರಕ್ಕೆ ಸಚಿವ ಹೆಚ್. ಸಿ ಮಹದೇವಪ್ಪ ಪುತ್ರ ಸುನಿಲ್ ಬೋಸ್ಗೆ ಟಿಕೆಟ್ ನೀಡಿದೆ. ಹೆಚ್. ಸಿ ಮಹದೇವಪ್ಪ ತಮ್ಮ ಮಗನಿಗೇ ಟಿಕೆಟ್ ನೀಡುವಂತೆ ಸಿಎಂ ಸಿದ್ದರಾಮಯ್ಯಗೆ ದಂಬಾಲು ಬಿದ್ದ ಕಾರಣ ಕೊನೆಯದಾಗಿ ಸುನಿಲ್ ಬೋಸ್ಗೆ ಟಿಕೆಟ್ ಕೊಡಿಸುವಲ್ಲಿ ಸಫಲರಾಗಿದ್ದಾರೆ.
ಸಿಎಂ ಸಿದ್ದರಾಮಯ್ಯ ಚಾಮರಾಜನಗರ ಕ್ಷೇತ್ರದಲ್ಲಿ ಮಹದೇವಪ್ಪನವರೇ ನಿಲ್ಲುವಂತೆ ಪಟ್ಟು ಹಿಡಿದಿದ್ದರು. ಹೆಚ್. ಸಿ ಮಹದೇವಪ್ಪ ಅಖಾಡಕ್ಕೆ ಇಳಿಯಲು ಆಸಕ್ತಿ ಹೊಂದಿರಲಿಲ್ಲ. ತನ್ನ ಬದಲು ಮಗ ಸುನಿಲ್ ಬೋಸ್ಗೆ ಟಿಕೆಟ್ ನೀಡುವಂತೆ ತೀವ್ರ ಒತ್ತಡ ಹಾಕಿದ್ದರು. ಬಳಿಕ ಸಚಿವ ಹೆಚ್. ಸಿ ಮಹದೇವಪ್ಪ ತಮ್ಮ ಪುತ್ರನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಆತನಿಗೆ ಟಿಕೆಟ್ ನೀಡುವಂತೆ ಮನವೊಲಿಕೆ ಮಾಡಿಸುವಲ್ಲಿ ಸಫಲರಾಗಿದ್ದರು.
ಚಿಕ್ಕಬಳ್ಳಾಪುರಕ್ಕೆ ರಕ್ಷಾ ರಾಮಯ್ಯಗೆ ಮಣೆ: ಕಾಂಗ್ರೆಸ್ಗೆ ಕಗ್ಗಂಟಾಗಿ ಪರಿಣಮಿಸಿದ್ದ ಮತ್ತೊಂದು ಕ್ಷೇತ್ರ ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಪರಿಷತ್ ಸದಸ್ಯ ಎಂ. ಆರ್ ಸೀತಾರಾಮ್ ಪುತ್ರ ಮತ್ತು ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವ ರಕ್ಷಾ ರಾಮಯ್ಯಗೆ ಮಣೆ ಹಾಕಿದೆ.
ಆದರೆ, ಮಾಜಿ ಸಿಎಂ ವೀರಪ್ಪ ಮೊಯ್ಲಿ ಹಾಗೂ ಮಾಜಿ ಸಚಿವ ಎನ್. ಹೆಚ್ ಶಿವಶಂಕರ ರೆಡ್ಡಿ ಟಿಕೆಟ್‌ಗಾಗಿ ತೀವ್ರ ಲಾಬಿ ನಡೆಸಿದ್ದರು. ಹಿಂದುಳಿದ ವರ್ಗಗಳ ನಾಯಕ ಎನಿಸಿರುವ ವೀರಪ್ಪ ಮೊಯಿಲಿ ಅವರು ದೇವಾಡಿಗ ಸಮುದಾಯಕ್ಕೆ ಸೇರಿದವರು. ದೇವಾಡಿಗ ಸಮುದಾಯ ಕ್ಷೇತ್ರದಲ್ಲಿ ನಗಣ್ಯವಾಗಿದೆ. ಕ್ಷೇತ್ರದಲ್ಲಿ ಎರಡು ಬಾರಿ ಸಂಸದರಾಗಿದ್ದರೂ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅವರ ಪ್ರಾಬಲ್ಯ ಕ್ಷೇತ್ರದಲ್ಲಿ ಕಡಿಮೆಯಾಗುತ್ತಾ ಸಾಗಿತ್ತು.
ಮಾಜಿ ಸಚಿವ ಎನ್. ಎಚ್ ಶಿವಶಂಕರ ರೆಡ್ಡಿ ಟಿಕೆಟ್ಗೆ ಪ್ರಬಲ ಆಕಾಂಕ್ಷಿಯಾಗಿದ್ದರು. ಹೊರಗಿನವರ ಬದಲು ತಮಗೇ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದರು. ಆದರೆ, ರಕ್ಷಾ ರಾಮಯ್ಯ ಬಲಜಿಗ ಸಮುದಾಯದವರಾಗಿದ್ದು, ಕ್ಷೇತ್ರದ ಮೂರು ತಾಲೂಕುಗಳಲ್ಲಿ ಸಮುದಾಯ ಅತಿ ಹೆಚ್ಚು ಪ್ರಾಬಲ್ಯ ಹೊಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ರಕ್ಷಾ ರಾಮಯ್ಯ ಅವರ ಪರ ನಿಲುವು ತಾಳಿದ್ದರು ಎನ್ನಲಾಗಿದೆ. ಹೀಗಾಗಿ ಕೊನೆಗೆ ಯುವಕ ರಕ್ಷಾ ರಾಮಯ್ಯಗೆ ಹೈಕಮಾಂಡ್ ಮಣೆ ಹಾಕಿದೆ.
ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ಇ.ತುಕಾರಾಂಗೆ ಟಿಕೆಟ್: ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಹಾಲಿ ಶಾಸಕ ಇ.ತುಕರಾಂಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಎದುರಾಗಿತ್ತು. ಮಾಜಿ ಸಂಸದ ವಿ. ಎಸ್. ಉಗ್ರಪ್ಪ, ಸಚಿವ ಬಿ.ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್, ಅಳಿಯ ಮುರಳಿ ಕೃಷ್ಣ ಮುಂತಾದವರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಕೊನೆಯದಾಗಿ ಸಂಡೂರು ಶಾಸಕ ಇ. ತುಕರಾಂಗೆ ಟಿಕೆಟ್ ನೀಡಿದೆ.
ಕಾಂಗ್ರೆಸ್ ಅಂತಿಮವಾಗಿ ಇ.ತುಕಾರಾಂ ಪುತ್ರಿ ಚೈತನ್ಯ ಅವರನ್ನು ಅಖಾಡಕ್ಕಿಳಿಸಲು ಲಾಬಿ ನಡೆಸಿದ್ದರು. ಆದರೆ, ಬಿಜೆಪಿಯಿಂದ ಶ್ರೀರಾಮುಲು ಸ್ಪರ್ಧಿಸುತ್ತಿದ್ದಂತೆಯೇ ಕಾಂಗ್ರೆಸ್ ಗೇಮ್ ಪ್ಲ್ಯಾನ್ ಬದಲಾಗಿದ್ದು, ಪುತ್ರಿ ಬದಲಿಗೆ ನೀವೇ ಸ್ಪರ್ಧೆ ಮಾಡಿ ಎಂದು ಕಾಂಗ್ರೆಸ್ ತುಕರಾಂಗೆ ಸೂಚಿಸಿತ್ತು. ಆದರೆ, ಇದಕ್ಕೆ ತುಕರಾಂ ನಿರಾಕರಿಸಿದ್ದು, ನನಗೆ ಬೇಡ ನನ್ನ ಪುತ್ರಿಗೆ ಟಿಕೆಟ್ ಕೊಡಿ ಎಂದು ಪಟ್ಟು ಹಿಡಿದಿದ್ದರು. ಅಂತಿಮವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿ. ಕೆ ಶಿವಕುಮಾರ್ ಅವರು ಇ.ತುಕರಾಂರನ್ನು ಬಳ್ಳಾರಿಯಿಂದ ಸ್ಪರ್ಧೆ ಮಾಡುವಂತೆ ಮನವೊಲಿಸಿದ್ದರು. ಕೊನೆಗೆ ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಆಪ್ತ ಶಾಸಕ ತುಕಾರಾಂ ಹೆಸರು ಫೈನಲ್ ಮಾಡಿದೆ.
ಕಗ್ಗಂಟಾಗಿರುವ ಕೋಲಾರ ಟಿಕೆಟ್ ಪೆಂಡಿಂಗ್ : ಕಾಂಗ್ರೆಸ್ಗೆ ತೀವ್ರ ಕಗ್ಗಂಟಾಗಿ ಪರಿಣಮಿಸಿರುವ ಕೋಲಾರ ಲೋಕಸಭೆ ಕ್ಷೇತ್ರದ ಟಿಕೆಟ್ ಘೋಷಿಸದೇ ಬಾಕಿ ಉಳಿಸಿಕೊಂಡಿದೆ. ಕೋಲಾರದಲ್ಲಿ ಕಾಂಗ್ರೆಸ್ ಬಣ ರಾಜಕೀಯ ಹೈಕಮಾಂಡ್ಗೆ ದೊಡ್ಡ ತಲೆನೋವಾಗಿದೆ. ಕೋಲಾರದಿಂದ ರಾಜ್ಯಸಭೆ ಮಾಜಿ ಸದಸ್ಯ ಡಾ. ಎಲ್. ಹನುಮಂತಯ್ಯ, ಆಹಾರ ಸಚಿವ ಕೆ. ಹೆಚ್. ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣ ನಡುವೆ ಟಿಕೆಟ್‌ಗಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ. ಸಚಿವ ಕೆ. ಹೆಚ್ ಮುನಿಯಪ್ಪ ತಮ್ಮ ಅಳಿಯನಿಗೆ ಟಿಕೆಟ್ ಕೊಡಿಸಲು ಪಟ್ಟು ಹಿಡಿದಿದ್ದರು. ಹೈಕಮಾಂಡ್, ಸಿಎಂ ಸಿದ್ದರಾಮಯ್ಯ, ಡಿಕೆಶಿ ಮುಂದೆ ಪ್ರಬಲ ಲಾಬಿ ನಡೆಸಿದ್ದರು. ಮುನಿಯಪ್ಪ ಅಳಿಯನಿಗೆ ಟಿಕೆಟ್ ನೀಡುವ ಬಗ್ಗೆ ಮಾಜಿ ಸಚಿವ ರಮೇಶ್ ಕುಮಾರ್ ಬಣ ವಿರೋಧ ವ್ಯಕ್ತಪಡಿಸಿತ್ತು.
ಸಚಿವರ ಅಳಿಯನಿಗೆ ಟಿಕೆಟ್ ಬಹುತೇಕ ಫಿಕ್ಸ್ ಎಂಬ ಮಾಹಿತಿ ಬಂದ ಹಿನ್ನೆಲೆ ಕೋಲಾರ ಶಾಸಕರು ರಾಜೀನಾಮೆ ನೀಡುವ ಹಂತದವರೆಗೆ ಹೋಗಿ, ಸಚಿವ ಮುನಿಯಪ್ಪ ಅಳಿಯನಿಗೆ ಟಿಕೆಟ್ ನೀಡದಂತೆ ಬಂಡಾಯ ಎದ್ದಿದ್ದರು. ಎರಡೂ ಕಡೆಯಿಂದ ನಾ ಕೊಡೆ ನಾ ಬಿಡೆ ಎಂಬಂತಾದ ಕಾರಣ ಮೂರನೇ ಅಭ್ಯರ್ಥಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ:ಬಿಜೆಪಿ ತಾರಾ ಪ್ರಚಾರಕರ ಪಟ್ಟಿ ಬಿಡುಗಡೆ : ಬಿ ಎಲ್ ಸಂತೋಷ್ಗಿಲ್ಲ ಅವಕಾಶ, ಬಿಎಸ್ವೈ ಮೇಲುಗೈ - BJP Star Campaigner List