ಕರ್ನಾಟಕ

karnataka

ETV Bharat / state

ಮಾರ್ಚ್​​ 7ರಂದು 2025-26ನೇ ಸಾಲಿನ ಬಜೆಟ್ ಮಂಡನೆ : ಸಿಎಂ ಸಿದ್ದರಾಮಯ್ಯ - KARNATAKA BUDGET 2025

2025-26ನೇ ಸಾಲಿನ ಬಜೆಟ್​ನ್ನು ಮಾರ್ಚ್​​ 7ರಂದು ಮಂಡನೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

karnataka-budget-will-be-presented-on-march-7-says-cm-siddaramaiah
ಸಿಎಂ ಸಿದ್ದರಾಮಯ್ಯ (ETV Bharat)

By ETV Bharat Karnataka Team

Published : Feb 17, 2025, 3:51 PM IST

ಬೆಂಗಳೂರು:''2025-26ನೇ ಸಾಲಿನ ಬಜೆಟ್​​ನ್ನು ಮಾರ್ಚ್​​​ 7ರಂದು ಮಂಡನೆ ಮಾಡಲಿದ್ದೇನೆ. ಎಷ್ಟು ದಿನ ಸದನ ನಡೆಸಬೇಕು ಅಂತ ಕಾರ್ಯಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ಮಾಡುತ್ತೇವೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ''ವಿಧಾನಮಂಡಲ ಜಂಟಿ ಅಧಿವೇಶನ ಮಾರ್ಚ್​​ 3ನೇ ತಾರೀಖಿನಿಂದ‌ ಶುರುವಾಗುತ್ತದೆ. ಹೊಸ ವರ್ಷದ ಮೊದಲನೇ ಅಧಿವೇಶನ ಆಗಿರುವುದರಿಂದ ಮಾ. 3ರಂದು ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಅದರ ಮೇಲೆ ಚರ್ಚೆ ಆಗುತ್ತದೆ. 2025-26ನೇ ಸಾಲಿನ ಬಜೆಟ್​ನ್ನು ಮಾ.7 ರಂದು ಶುಕ್ರವಾರ ಮಂಡಿಸುತ್ತೇವೆ'' ಎಂದರು.

''ಕಳೆದ ಅನೇಕ ದಿನಗಳಿಂದ ಬೇರೆ ಬೇರೆ ಇಲಾಖೆ ಜೊತೆ ಸಭೆ ಮಾಡಿದ್ದೇನೆ. ನನಗೆ ಅನಾರೋಗ್ಯ ಇದ್ದರೂ ಸಭೆ ಮಾಡಿದ್ದೇನೆ. ಇವತ್ತು ಕೂಡ ಸಭೆ ನಡೆಸಿದ್ದೇನೆ‌. ರೈತ ಮುಖಂಡರು ತಮ್ಮ ಅಭಿವೃದ್ಧಿ ಮುಂದಿಟ್ಟಿದ್ದಾರೆ. ಕರ್ನಾಟಕ ಸರ್ಕಾರ ಯಾವಾಗಲೂ ರೈತರ ಹಿತ ಕಾಪಾಡಲು ಹಿಂದೆ ಬಿದ್ದಿಲ್ಲ. ಯಾವತ್ತೂ ಕೂಡ ರೈತರ ಜೊತೆ ಇರುತ್ತೇವೆ. ಕೃಷಿಕರ ಜೊತೆ ಇರುತ್ತೇವೆ ಎಂಬ ಮಾತು ಕೊಡುತ್ತೇವೆ'' ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ (ETV Bharat)

ಬೆಲೆ ಏರಿಕೆ ಜಾಸ್ತಿ ಆಗುತ್ತಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸುತ್ತ, ''ಬೆಲೆ ಏರಿಕೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ಧಾರ. ರಾಜ್ಯ ಸರ್ಕಾರದಿಂದ ಬೆಲೆ ಇಳಿಕೆಗೆ ಏನೆಲ್ಲಾ ಮಾಡಬೇಕೋ ಅದನ್ನು ಮಾಡುತ್ತೇವೆ, ಅವರೂ ಮಾಡಬೇಕು'' ಎಂದು ತಿಳಿಸಿದರು.

ಕೇಂದ್ರದ ಪಾಲು ಕೊಡುತ್ತಿಲ್ಲ : ಜನಜೀವನ ಮಿಷಿನ್ ಯೋಜನೆ ಕುರಿತು ವಾಗ್ವಾದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ''ಚರ್ಚೆ ಎಲ್ಲಾ ಮಾಡಿದ್ದೇನೆ. ನಮ್ಮ ವೇಗಕ್ಕೆ ಅನುಗುಣವಾಗಿ ಅವರು ಮಾಡುತ್ತಿಲ್ಲ. ಕೇಂದ್ರದ ಪಾಲನ್ನು ಅವರು ಕೊಡುತ್ತಿಲ್ಲ. ಹಾಗಾಗಿ, ನಾವು ಅದರ ಬಗ್ಗೆ ಟ್ವೀಟ್ ಮಾಡಿದ್ದೇವೆ. ಮೆಟ್ರೋ ರೈಲಿನ ದರ ನಿಗದಿ ಮಾಡಲು ಕೇಂದ್ರ ಸರ್ಕಾರ ಕಮಿಟಿ ಮಾಡಿದ್ದಾರೆ. ಅದರಲ್ಲಿ ಇಬ್ಬರು ಕೇಂದ್ರದ ಅಧಿಕಾರಿಗಳು, ಒಬ್ಬರು ರಾಜ್ಯ ಸರ್ಕಾರದವರು ಇರುತ್ತಾರೆ. ಅದು ಅಟಾನಮಸ್ ಬಾಡಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ಮಾಡಿರುವುದು. ಬೆಲೆ ನಿಗದಿ ಮಾಡಲು ನಾವು ಪ್ರಸ್ತಾವನೆ ಕೊಡುತ್ತೇವೆ. ಆದರೆ ಬೆಲೆ ನಿಗದಿ ಮಾಡುವುದು ಕಮಿಟಿಯವರು'' ಎಂದರು.

ಕೂಡಲೇ ಹಣ ಬಿಡುಗಡೆ :ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಯ ಹಣ ಬಿಡುಗಡೆ ಆಗಿಲ್ಲ ಎಂಬ ಆರೋಪ ವಿಚಾರವಾಗಿ ಮಾತನಾಡಿ, ''ಆಗಿಲ್ಲ ಅಂತ ಯಾರು ಹೇಳಿದ್ದು? ನೋಡಪ್ಪ, ಯಾವುದನ್ನು ಕೂಡ ನಿಲ್ಲಿಸುವ ಪ್ರಶ್ನೆ ಇಲ್ಲ. ಇಲ್ಲಿಯವರೆಗೆ ಮಾಡಿದ್ದೇವೆ ಅಂದರೆ ಮುಂದೆಯೂ ಮಾಡುತ್ತೇವೆ. ಮೂರು ತಿಂಗಳಿಂದ ಪೆಂಡಿಂಗ್ ಇರುವುದು ನನಗೆ ಗೊತ್ತಿಲ್ಲ, ಕೂಡಲೇ ಬಿಡುಗಡೆ ಮಾಡುತ್ತೇವೆ'' ಎಂದು ಸಿಎಂ ಹೇಳಿದರು.

ಅನಾರೋಗ್ಯ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ''ಆರೋಗ್ಯ ಸುಧಾರಣೆ ಆಗುತ್ತಿದೆ, ನೋವು ಕಡಿಮೆಯಾಗುತ್ತಿದೆ. ಒತ್ತಡ ಆಗಿರುವುದರಿಂದ ನೋವಿದೆ'' ಎಂದರು.

ನಾಯಕತ್ವ ಬದಲಾವಣೆ ಹೇಳಿಕೆಗಳ ವಿಚಾರವಾಗಿ ಮಾತನಾಡಿದ ಸಿಎಂ, ''ಹೈಕಮಾಂಡ್ ನಿರ್ಧಾರವೇ ಅಂತಿಮ'' ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಹಿಂದೆ ಬಿಜೆಪಿ ಮುಖ್ಯಮಂತ್ರಿಗಳು ಸಿಟಿ ರೌಂಡ್ ಮಾಡಿದ್ದು ಫೋಟೋಶೂಟ್​​ಗಾ : ಡಿ.ಕೆ.ಶಿವಕುಮಾರ್ ತಿರುಗೇಟು

ABOUT THE AUTHOR

...view details