ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಕಾಂಗ್ರೆಸ್ ಪಕ್ಷ ಮೂರಂಕಿ ಸಾಧನೆ ಮಾಡಲಾಗಿಲ್ಲ. ಸುಳ್ಳು ಆಶ್ವಾಸನೆ ಕೊಟ್ಟರೂ ಕಾಂಗ್ರೆಸ್ ದಯನೀಯ ಸೋಲು ಅನುಭವಿಸಿದೆ ಎಂದು ಬಿಜೆಪಿಯ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂಂತ್ರಿ ಬಿ.ಎಸ್.ಯಡಿಯೂರಪ್ಪ ಲೇವಡಿ ಮಾಡಿದರು.
ನಗರದ ಅರಮನೆ ಮೈದಾನದಲ್ಲಿ ಇಂದು ರಾಜ್ಯ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನೂತನ ಕೇಂದ್ರ ಸಚಿವರು ಹಾಗೂ ಸಂಸದರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧದ ಆಕ್ರೋಶವನ್ನು ಜನ ಚುನಾವಣೆ ಮೂಲಕ ವ್ಯಕ್ತಪಡಿಸಿದ್ದಾರೆ. ಆಮಿಷ, ಹಣಬಲದ ಹೊರತಾಗಿಯೂ 19 ಕ್ಷೇತ್ರಗಳಲ್ಲಿ ಜನರು ಎನ್ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಕಾರ್ಯಕರ್ತರ ಪರಿಶ್ರಮದಿಂದ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧ್ಯವಾಯಿತು ಎಂದರು.
ಟಿಕೆಟ್ ಕೊಡುವುದರಲ್ಲಿ ಆದ ವ್ಯತ್ಯಾಸದಿಂದ 3-4 ಸ್ಥಾನ ನಾವು ಕಳೆದುಕೊಂಡೆವು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 130ರಿಂದ 140 ಸ್ಥಾನ ಗೆಲ್ಲಲು ಈಗಿನಿಂದಲೇ ಪ್ರಯತ್ನ ಆರಂಭಿಸಬೇಕು. ಸಂಸದರು ಅವರವರ ಕ್ಷೇತ್ರಗಳಲ್ಲಿ ಮೋದಿಯ ಜನ ಸೇವಕರಾಗಿ ಕೆಲಸ ಮಾಡಬೇಕಿದೆ. ಕಾಂಗ್ರೆಸ್ ಅಂದರೆ ಅಭಿವೃದ್ಧಿ ಶೂನ್ಯ ಎಂಬುದನ್ನು ಮನವರಿಕೆ ಮಾಡಬೇಕಾಗಿದೆ. ಬಿಬಿಎಂಪಿ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಚುನಾವಣೆಗಳನ್ನು ಬಿಜೆಪಿ-ಜೆಡಿಎಸ್ ಒಟ್ಟಾಗಿ ಎದುರಿಸಬೇಕಿದೆ ಎಂದು ಹೇಳಿದರು.
ಅಹಂಕಾರಕ್ಕೆ ಜನ ಕಪಾಳಮೋಕ್ಷ- ಜೋಶಿ:ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ರಾಜ್ಯದಲ್ಲಿ ಅಪಪ್ರಚಾರದ ನಡುವೆಯೂ ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ 19 ಕ್ಷೇತ್ರಗಳಲ್ಲಿ ಗೆದ್ದಿದೆ. ಈ ಮೂಲಕ ಜನರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಅಹಂಕಾರಕ್ಕೆ ಜನ ಕಪಾಳಮೋಕ್ಷ ಮಾಡಿದ್ದಾರೆ ಎಂದರು.