ಮೈಸೂರು:ಕೇರಳದ ವೈಯನಾಡಿನಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆ ಕಬಿನಿ ಜಲಾಶಯದಿಂದ ಹೊರಹರಿವು ಹೆಚ್ಚಳವಾಗಿದೆ. ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದ ನದಿ ಸಮೀಪದ ಮನೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಹಂಪಾಪುರ, ಹರದನಹಳ್ಳಿ ಮಧ್ಯೆ ಇರುವ ಕಪಿಲಾ ನದಿ ಸೇತುವೆ ಮುಳುಗಡೆಯಾಗಿದ್ದು, ನದಿ ಪಾತ್ರದಲ್ಲಿರುವ 124 ಗ್ರಾಮಗಳಿಗೆ ಕುಡಿಯುವ ನೀರಿನ ಪಂಪ್ ಹೌಸ್ ಕೂಡ ಮುಳುಗಡೆಯಾಗಿದೆ. ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಬಿನಿ ಬಲದಂಡೆ ನಾಲೆಯೂ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಕಣೇನೂರು ಮತ್ತು ಹುಲ್ಲಹಳ್ಳಿ ಸಂಪರ್ಕ ರಸ್ತೆಯಲ್ಲಿ ನೀರು ಹರಿಯುತ್ತಿರುವುದರಿಂದ ತಾತ್ಕಾಲಿಕವಾಗಿ ಆ ಮಾರ್ಗವನ್ನು ಬಂದ್ ಮಾಡಲಾಗಿದೆ. ಇನ್ನು ಸುಣ್ಣದಕೇರಿ ಮತ್ತು ನದಿ ಪಾತ್ರದಲ್ಲಿರುವ ನಾಲ್ಕಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದು, ಮಗ್ಗದ ಬೀದಿಯಲ್ಲಿ ವಾಸಿಸುವ ನಿವಾಸಿಗಳನ್ನು ಸ್ಥಳಾಂತರ ಮಾಡಿ ಗಂಜಿ ಕೇಂದ್ರ ತೆರೆಯಲು ತಾಲೂಕು ಆಡಳಿತ ಸಿದ್ಧತೆ ನಡೆಸಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಧರ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಮಲ್ಲಿಕಾರ್ಜುನ, ಅನ್ಸರ್ ಅಹಮದ್ ಸೇರಿದಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂಜುಂಡೇಶ್ವರನಿಗೂ ಕಪಿಲೆಯ ದಿಗ್ಬಂಧನ:ಕಪಿಲಾ ನದಿ ಪ್ರವಾಹದಿಂದಾಗಿ ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರನಿಗೂ ಕಪಿಲೆಯ ದಿಗ್ಬಂಧನವಾಗಿದೆ. ಕಬಿನಿ ಹಾಗೂ ನುಗು ಜಲಾಶಯದಿಂದ ಒಟ್ಟಾರೆ 70 ಸಾವಿರ ಕ್ಯೂಸೆಕ್ ಪ್ರಮಾಣದ ನೀರನ್ನು ಹೊರಬಿಡಲಾಗಿತ್ತು. ಇದರಿಂದಾಗಿ ಮಲ್ಲನ ಮೂಲೆ ಸಮೀಪ ಮೈಸೂರು-ನಂಜನಗೂಡು ಮುಖ್ಯರಸ್ತೆಗೆ ಜಲಾವೃತವಾಗಿದೆ. ಪ್ರವಾಹದ ಹೆಚ್ಚಳದಿಂದಾಗಿ ನಂಜನಗೂಡು ನಗರದ ತೋಪಿನ ಬೀದಿ, ಸರಸ್ವತಿ ಕಾಲೋನಿ ಹಾಗೂ ಹಳ್ಳದ ಕೇರಿ ಬಡಾವಣೆಯಲ್ಲಿ ಮನೆಗಳು ಜಲಾವೃತ ಗೊಂಡಿವೆ. ತಾಲೂಕು ಆಡಳಿತದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲು ನೆರವಾದರು.