ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ದೆಹಲಿಯಲ್ಲಿ ನಡೆದ ಭಾರತ ಕೌಶಲ್ಯ ಸ್ಪರ್ಧೆಯಲ್ಲಿ ಕನ್ನಡಿಗರು 47 ಪದಕಗಳನ್ನ ಗೆದ್ದು ದೇಶದಲ್ಲಿ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಇಂದು ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್ಪೋರ್ಟ್ಗೆ ಆಗಮಿಸಿದ ಸ್ಪರ್ಧಿಗಳಿಗೆ ಕೌಶಲ್ಯಾಭಿವೃದ್ಧಿ ಇಲಾಖೆ ಅದ್ಧೂರಿಯಾಗಿ ಸ್ವಾಗತ ಕೋರಿದೆ.
ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಈ ವರ್ಷದ ಭಾರತದ ಕೌಶಲ್ಯ ಸ್ಪರ್ಧೆಯನ್ನು ಮೇ.15 ರಿಂದ 19 ರವರೆಗೆ ದೆಹಲಿಯ ದ್ವಾರಕಾದಲ್ಲಿ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ 400ಕ್ಕೂ ಹೆಚ್ಚು ಉದ್ಯಮ ತಜ್ಞರು ಸೇರಿದಂತೆ 30 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 900ಕ್ಕೂ ಹೆಚ್ಚು ಸ್ಪರ್ಧಿಗಳು ತಮ್ಮ ರಾಜ್ಯಗಳನ್ನು ಪ್ರತಿನಿಧಿಸಿದ್ದರು, ಕರ್ನಾಟಕದಿಂದ ಒಟ್ಟು 52 ಸ್ಪರ್ಧಿಗಳನ್ನು ಕಳುಹಿಸಲಾಗಿತ್ತು. ಜೊತೆಗೆ 42 ಕೌಶಲ್ಯ ವಿಭಾಗದಲ್ಲಿ ಸ್ಪರ್ಧಿಸಿ 13 ಚಿನ್ನದ ಪದಕ, 12 ರಜತ, 3 ಕಂಚು ಹಾಗೂ 19 ಶ್ರೇಷ್ಠತೆಯ ಪದಕಗಳನ್ನು ಪಡೆಯುವ ಮೂಲಕ ರಾಜ್ಯದ ಯುವಕ - ಯುವತಿಯರು ದೇಶಕ್ಕೆ ದ್ವಿತೀಯ ಸ್ಥಾನ ಪಡೆದು ರಾಜ್ಯದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.