ಕಲಬುರಗಿ:ಕಲಬುರಗಿ ಜಿಲ್ಲೆಯ 9 ತಾಲೂಕಿನ ನಾಡ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಸೋಮವಾರ ಸಂಜೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ಜಾನ್ ಆಂಟೋನಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮಂಜುನಾಥ್ ಗಂಗಾಲ್ ಮತ್ತು ಗೀತಾ ಬೆನಾಳ್ ನೇತೃತ್ವದಲ್ಲಿ ತಲಾ ಹತ್ತು ಅಧಿಕಾರಿ ಹಾಗೂ ಸಿಬ್ಬಂದಿ ತಂಡ 9 ಕಡೆಗಳಲ್ಲಿರುವ ನಾಡ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ. ನಾಡ ಕಚೇರಿಗಳಲ್ಲಿ ಸಾರ್ವಜನಿಕರಿಗೆ ನಿಗದಿತ ಸೇವಾ ಶುಲ್ಕಕ್ಕಿಂತ ಹೆಚ್ಚಿನ ಹಣ ಸುಲಿಗೆ ಮಾಡಲಾಗುತ್ತಿದೆ. ಆದಾಯ ಪ್ರಮಾಣಪತ್ರ ಸೇರಿ ಸರ್ಕಾರಿ ದಾಖಲೆಗಳನ್ನು ಮಾಡಿಕೊಡಲು ಹಣ ಸುಲಿಗೆ ಮಾಡುತ್ತಿರುವ ಆರೋಪಗಳು ಕೇಳಿ ಬಂದಿದ್ದವು. ಇದೇ ವಿಚಾರವಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ದಿಢೀರ್ ದಾಳಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಮಟ್ಕಾ, ಜೂಜಾಟ- 13 ಜನರ ಬಂಧನ:ಕಲಬುರಗಿ ನಗರದ ಎಸ್ಟಿಬಿಟಿ ಹತ್ತಿರ ಮಟ್ಕಾ ಬರೆದುಕೊಳ್ಳುತ್ತಿದ್ದ ಓರ್ವನನ್ನು, ಗಂಜ್ ಏರಿಯಾದಲ್ಲಿ ಜೂಜಾಡುತ್ತಿದ್ದ 6 ಜನ ಮತ್ತು ಕವಲಗಾ (ಬಿ) ಸೀಮಾಂತರದಲ್ಲಿ ಜೂಜಾಟವಾಡುತ್ತಿದ್ದ 6 ಜನ ಸೇರಿ ಒಟ್ಟು 13 ಜನರನ್ನು ಬಂಧಿಸಲಾಗಿದೆ. ಪೊಲೀಸರು ಬಂಧಿತರಿಂದ 35,250 ರೂ. ನಗದು ಜಪ್ತಿ ಮಾಡಿದ್ದಾರೆ.