ಶಿವಮೊಗ್ಗ: ರಾಹುಲ್ ಗಾಂಧಿ ಹೋದ ಕಡೆಯಲ್ಲೆಲ್ಲಾ ಕಾಂಗ್ರೆಸ್ ಸೋತಿದೆ. ಹೀಗಾಗಿ ಅವರು ಶಿವಮೊಗ್ಗಕ್ಕೂ ಬರಲಿ ಎಂದು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು. ನಗರದ ರಾಷ್ಟ್ರಭಕ್ತ ಬಳಗದ ಚುನಾವಣಾ ಕಚೇರಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಶಿವಮೊಗ್ಗಕ್ಕೆ ಬರಲಿ, ಕಾಂಗ್ರೆಸ್ ಸೋಲಲಿ ಎಂದು ಆಶಿಸಿದರು.
ಸಿಎಂ ಸಿದ್ದರಾಮಯ್ಯನವರು ಮುಸ್ಲಿಂ ಸಮುದಾಯಕ್ಕೆ ಎಲ್ಲಾ ರೀತಿಯ ಸೌಲಭ್ಯ ಮಾಡಿಕೊಡಲಾಗುವುದು ಎಂದು ಹೇಳಿದ್ದು ನನಗೆ ನೋವು ತಂದಿದೆ. ಮುಸ್ಲಿಮರಿಗೆ ಸೌಲಭ್ಯ ಕೊಡಲು ಯಾವುದೇ ಹಿಂಜರಿಕೆ ಇಲ್ಲ ಎಂದು ಹೇಳಿದ್ದಾರೆ. ನೇಹಾ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಿದ್ದಾರೆ. ಸಿಐಡಿ ಸರ್ಕಾರದ ಬಳಿ ಇರುವ ಸಂಸ್ಥೆ. ಈಗಾಗಲೇ ಸಿಎಂ ಇದು ವೈಯಕ್ತಿಕವಾಗಿ ನಡೆದ ಕೊಲೆ ಎಂದು ಹೇಳಿದ್ದಾರೆ. ಇದರಿಂದಾಗಿ ಸಿಐಡಿ ಇನ್ನೇನು ವರದಿ ಕೊಡುತ್ತದೆ?. ಸಂತೋಷ್ ಲಾಡ್ ನೇಹಾ ಮನೆ ಪಿಕ್ನಿಕ್ ತಾಣವಾಗಿದೆ ಎಂದು ಹೇಳಿದ್ರು, ಹಾಗಾದ್ರೆ ನಿನ್ನೆ ಸಿಎಂ ಯಾಕೆ ಅಲ್ಲಿಗೆ ಹೋದ್ರು?. ಕಾಂಗ್ರೆಸ್ ಸರ್ವಜನಾಂಗದ ಶಾಂತಿಯ ತೋಟ ಎಂದು ಹೇಳಿ, ಮತ್ತೊಂದು ಕಡೆ ತುಷ್ಟೀಕರಣ ಮಾಡುತ್ತಿದೆ ಎಂದು ಆರೋಪಿಸಿದರು.