ಬೆಂಗಳೂರು:"ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು, ಸಿಎಂ, ಡಿಸಿಎಂ ರಾಜ್ಯದ ಎಲ್ಲಾ ಜನರಿಗೂ ಒಂದು ಮಾತು ಕೊಟ್ಟಿದ್ದರು. ಕಾಕಾ ಪಾಟೀಲ್ ನಿನಗೂ ಫ್ರೀ, ಮಹದೇವಪ್ಪ ನಿನಗೂ ಫ್ರೀ ಅಂದಿದ್ರು. ರಾಜ್ಯದ ಜನತೆ ಗ್ಯಾರಂಟಿ ಕೇಳದಿದ್ದರೂ ಅವರು ಕೊಟ್ಟರು. ಆದರೆ, ಇದೀಗ ಗ್ಯಾರಂಟಿಗಳು ಜನರಿಗೆ ತಲುಪುತ್ತಿಲ್ಲ. ಹಾಗೆಯೇ ಗ್ಯಾರಂಟಿ ನಿಲ್ಲಿಸುವ ಮೂಲಕ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ರಾಜ್ಯ ಸರ್ಕಾರದ ಕರ್ತವ್ಯ" ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
78ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಇಂದು ಪಕ್ಷದ ಕೇಂದ್ರ ಕಚೇರಿ ಜೆ.ಪಿ.ಭವನದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಮಾತನಾಡಿದರು.
ಮುಂದುವರಿದು ಮಾತನಾಡಿದ ಅವರು, "ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿದರು. ಗೈಡ್‌ಲೈನ್ಸ್ ವ್ಯಾಲ್ಯೂ ಮೇಲೂ ಶೇ 30ರಷ್ಟು ಏರಿಕೆ ಮಾಡಿದ್ದಾರೆ. ಹಾಲಿನ ಪ್ರೋತ್ಸಾಹಧನ ಸಿಕ್ಕಿಲ್ಲ. ಹಗರಣಗಳ ರಾಜ್ಯದ ಹಣ ಲೂಟಿಯಾಗುತ್ತಿದೆ" ಎಂದು ಹರಿಹಾಯ್ದರು.
ತುಂಗಭದ್ರಾ ಡ್ಯಾಂ ಗೇಟ್ ಮುರಿದಿರುವ ವಿಚಾರ ಕುರಿತು ಮಾತನಾಡುತ್ತಾ, "ಕೃಷಿ, ಕುಡಿಯಲು, ಕೈಗಾರಿಕೆಗಳಿಗೆ ನೀರು ಬೇಕು. ಈಗಾಗಲೇ 27 ಟಿಎಂಸಿ ನೀರು ಹರಿದುಹೋಗಿದೆ. ಎಷ್ಟು ಹಾನಿ ಆಗಿದೆ ನೀವೇ ತಿಳಿದುಕೊಳ್ಳಬೇಕು. 63 ಟಿಎಂಸಿ ನೀರು ಖಾಲಿ ಮಾಡಿ ಗೇಟ್ ನಿರ್ಮಾಣ ಮಾಡಬೇಕು ಅಂತ ತಜ್ಞರು ಹೇಳಿದ್ದಾರೆ. ರಾಜ್ಯ ಸರ್ಕಾರ ರೈತರಿಗೆ ನಷ್ಟ ಆಗದಂತೆ ಕ್ರಮ ತೆಗೆದುಕೊಳ್ಳಬೇಕು" ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ಟಿ.ಎ.ಶರವಣ, ಬೆಂಗಳೂರು ಜೆಡಿಎಸ್ ಘಟಕದ ಅಧ್ಯಕ್ಷ ರಮೇಶ್ ಗೌಡ, ಮಾಜಿ ಸಚಿವೆ, ಹಿರಿಯ ರಾಜಕಾರಣಿ ಲೀಲಾದೇವಿ ಆರ್.ಪ್ರಸಾದ್, ಜೆಡಿಎಸ್ ಮುಖಂಡರಾದ ಆರ್.ಪ್ರಕಾಶ್, ಎಂ.ಎಸ್.ನಾರಾಯಣ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು. ಧ್ವಜಾರೋಹಣ ಬಳಿಕ ಮಕ್ಕಳಿಗೆ ಸಿಹಿ ಹಂಚಲಾಯಿತು.
"ಗ್ಯಾರಂಟಿ ನಿಲ್ಲಿಸೋಲ್ಲ": ಇನ್ನು, ನಗರದ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, "ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ. ಗ್ಯಾರಂಟಿಗಳಿಂದ ರಾಜ್ಯದ ಆರ್ಥಿಕತೆ ದಿವಾಳಿ ಅಂತ ಟೀಕಿಸಿದವರಿಗೆ ಈಗ ಉತ್ತರ ಸಿಕ್ಕಿದೆ" ಎಂದು ಟಾಂಗ್ ಕೊಟ್ಟರು.
ಇದನ್ನೂ ಓದಿ: ಅಂದು ಬ್ರಿಟಿಷರ ಪರ ನಿಂತವರನ್ನು ತಿರಸ್ಕಾರ ಮಾಡಬೇಕಿದೆ: ಡಿಸಿಎಂ ಡಿ.ಕೆ.ಶಿವಕುಮಾರ್ ಕರೆ