ಹಾಸನ: ನನ್ನ ಮಗನಿಗೆ ಮಂಡ್ಯದಲ್ಲಿ ನಿಲ್ಲಬೇಡ ಎಂದು ಹೇಳಿದ್ದೆ. ಆಗ ಅಲ್ಲಿ ನಮ್ಮ ಪಕ್ಷದ ಮೂವರು ಸಚಿವರಿದ್ದರು. ಅವರು ಮತ್ತು ಕಾರ್ಯಕರ್ತರು ಒತ್ತಡ ಹಾಕಿ ಅಲ್ಲಿ ನಿಖಿಲ್ನನ್ನು ಚುನಾವಣೆಗೆ ನಿಲ್ಲಿಸಿದ್ದರು. ಆದರೆ, ನಿಖಿಲ್ ಚುನಾವಣೆ ಸೋತರು. ಆ ಸೋಲಿಗೆ ಕಾರಣ ಇದೇ ಕಾಂಗ್ರೆಸ್, ಬಿಜೆಪಿ ಮತ್ತು ರೈತಸಂಘ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದರು.
ಹಾಸನದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ, ಜನರ ಪರವಾಗಿ ಕೆಲವು ಯೋಜನೆ ಇಟ್ಟುಕೊಂಡಿದ್ದ. ಅವುಗಳೆಲ್ಲವೂ ನಾಶವಾಯಿತು. ನನ್ನ ಮಗನಿಗಾದ ಪರಿಸ್ಥಿತಿ ಇಲ್ಲಿ ರೇವಣ್ಣನ ಕುಟುಂಬಕ್ಕೆ ಆಗಬಾರದು. ಹಾಗಾಗಿ ಅದನ್ನು ಉಳಿಸಿಕೊಳ್ಳಲು ಬಂದಿದ್ದೇನೆ. ದಯಮಾಡಿ ಉಳಿಸಿಕೊಳ್ಳಿ. ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅಭ್ಯರ್ಥಿಯಲ್ಲ. ಬದಲಿಗೆ ಈ ಜಿಲ್ಲೆಗೆ ನಾನೇನಾದರೂ ಕೊಡುಗೆ ಕೊಟ್ಟಿದ್ದರೆ ದಯಮಾಡಿ ಈ ಚುನಾವಣೆಯಲ್ಲಿ ಕುಮಾರಸ್ವಾಮಿ ಅಭ್ಯರ್ಥಿ ಎಂದು ಪರಿಗಣಿಸಿ ಮತನೀಡಿ ಎಂದು ಪರೋಕ್ಷವಾಗಿ ಪ್ರಜ್ವಲ್ ರೇವಣ್ಣ ಅಭ್ಯರ್ಥಿ ಎಂದು ಘೋಷಿಸಿದರು.
ಬಹುಶಃ ರಾಜ್ಯದಲ್ಲಿ ನಮಗೆ ಮಂಡ್ಯ, ಕೋಲಾರ ಮತ್ತು ಹಾಸನ ಕ್ಷೇತ್ರಗಳು ಸಿಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಮಗೆ ಜಾತಿ ಮುಖ್ಯವಲ್ಲ. ಆದರೆ, ರಾಜ್ಯ ಸರ್ಕಾರ ಜಾತಿ ಸಮೀಕ್ಷೆ ಮಾಡಿ ವಿಧಾನಸೌಧದಲ್ಲಿಟ್ಟು ಪೂಜೆ ಮಾಡ್ತಿದ್ದೀರಾ?. ವರದಿಯನ್ನು ಜನಗಳ ಮುಂದೆ ಇರಿಸಿ ಎಂದು ಆಗ್ರಹಿಸಿದ ಅವರು, ರಾಜ್ಯದ ಜನರ ಬದುಕು ಸರಿಪಡಿಸಲು ಹಣದ ಕೊರತೆಯಿಲ್ಲ. ನಿಮ್ಮ ಹಣದ ತೆರಿಗೆಯನ್ನು ಸರಿಯಾಗಿ ಬಳಕೆ ಮಾಡಿದರೇ ಪ್ರತಿ ಬಡವರ ಬದುಕು ಹಸನಾಗುತ್ತದೆ ಎಂದರು.