ನವದೆಹಲಿ/ಬೆಂಗಳೂರು: ಇಂದು ಬಿಜೆಪಿ ಸೇರಿರುವುದಕ್ಕೆ ಸಂತೋಷವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಅವರ ನಾಯಕತ್ವದಲ್ಲಿ ದೇಶ ಮತ್ತು ಪಕ್ಷ ಮತ್ತುಷ್ಟು ಬೆಳೆಯಬೇಕು. ಅದಕ್ಕಾಗಿ ಇಂದು ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಎಂದಿನಂತೆ ಪಕ್ಷಕ್ಕೆ ನಿಷ್ಠೆಯಿಂದ ತನ್ನ ಕೆಲಸ ಮುಂದುವರಿಸುತ್ತೇನೆ ಎಂದು ಬಿಜೆಪಿ ಸೇರಿದ ಬಳಿಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದರು.
ಇಂದು ಬೆಳಗ್ಗೆ ಅಮಿತ್ ಶಾ ಅವರನ್ನು ಭೇಟಿಯಾದೆವು. ಅವರು ನನ್ನನ್ನು ಅತ್ಯಂತ ಗೌರವ ಮತ್ತು ಪ್ರೀತಿಯಿಂದ ಬರಮಾಡಿಕೊಂಡರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನೂ ಕೂಡ ಇಂದು ಭೇಟಿಯಾಗುತ್ತೇನೆ. ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ, ಡಿ.ಕೆ ಶಿವಕುಮಾರ್ ಅವರಿಗೂ ಈಮೇಲ್ ಸಂದೇಶ ಕಳುಸಿದ್ದೇನೆ. ಹಾಗೆಯೇ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದು, ಈ ಬಗ್ಗೆ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರ ಜೊತೆ ಕೂಡ ಮಾತನಾಡಿದ್ದೇನೆ. ರಾಜೀನಾಮೆ ಪತ್ರ ಕಳುಹಿಸುವ ವ್ಯವಸ್ಥೆ ಮಾಡಿದ್ದೇನೆ ಎಂದು ವಿವರಿಸಿದರು. ಜೊತೆಗೆ, ಇಂದು ಅಧಿಕೃತವಾಗಿ ಪಕ್ಷದ ವರಿಷ್ಠರ ಸಮ್ಮುಖದಲ್ಲಿ ಮತ್ತೆ ಬಿಜೆಪಿ ಸೇರಿದ್ದೇನೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.
ದೇಶವನ್ನು ಒಗ್ಗೂಡಿಸಲು, ದೇಶದ ಹಿತರಕ್ಷಣೆಗಾಗಿ ಮತ್ತು ವಿಶ್ವದಲ್ಲಿ ದೇಶದ ಶಕ್ತಿಯನ್ನು ವೃದ್ಧಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಲಸ ಮಾಡಿದ್ದು, ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಈ ಆಶಯದ ಮೇರೆಗೆ ಪಕ್ಷಕ್ಕೆ ವಾಪಸ್ ಆಗಿದ್ದೇನೆ ಎಂದು ಶೆಟ್ಟರ್ ತಿಳಿಸಿದರು. ಬಿಜೆಪಿ ಶಾಸಕರು, ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರು ನಾನು ಮತ್ತೆ ಬಿಜೆಪಿ ಸೇರಬೇಕೆಂದು ಅಪೇಕ್ಷೆ ವ್ಯಕ್ತಪಡಿಸಿದ್ದರು. ರಾಷ್ಟ್ರೀಯ ನಾಯಕರೂ ಅದೇ ಆಶಯ ವ್ಯಕ್ತಪಡಿಸಿದ್ದರು. ಅದರಂತೆ ಬಿಜೆಪಿಗೆ ವಾಪಸ್ ಆಗಿದ್ದೇನೆ. ಬಿಜೆಪಿ ಪುನರ್ ಸೇರ್ಪಡೆ ಸಂತೋಷದ ಸಂಗತಿ ಎಂದರು.
ಹೀಗಿತ್ತು ಬಿಎಸ್ವೈ ಮಾತು : ನಮ್ಮೆಲ್ಲ ಕಾರ್ಯಕರ್ತರ ಅಪೇಕ್ಷೆಯಂತೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಬಿಜೆಪಿ ಮರುಸೇರ್ಪಡೆ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪ ಅವರು ತಿಳಿಸಿದರು.