ಮಂಡ್ಯ: ನಾಗಮಂಗಲ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಮಂಗಲ ಪಟ್ಟಣಕ್ಕೆ ಸಚಿವ ಎನ್. ಚಲುವರಾಯಸ್ವಾಮಿ ಭೇಟಿ ನೀಡಿ ಅಧಿಕಾರಿಗಳ ಜೊತೆ ಘಟನಾ ಸ್ಥಳ ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಪೊಲೀಸರಿಗೆ ಸೂಕ್ತ ಕ್ರಮಕ್ಕೆ ಸೂಚನೆ ನೀಡಿ, ಅನಾಹುತದಿಂದ ನಷ್ಟಕ್ಕೊಳಗಾದವರಿಗೆ ಪರಿಹಾರದ ಭರವಸೆ ನೀಡಿದರು.
ಇದೇ ವೇಳೆ ಮಾಧ್ಯಮದ ಜೊತೆ ಮಾತನಾಡಿ, "ನಾನು ಹೊರಗಡೆ ಇದ್ದೆ. ನಿನ್ನೆ ಸಂಜೆ 7 ಗಂಟೆಗೆ ಬೆಂಗಳೂರಿಗೆ ಬಂದೆ. ಪೊಲೀಸರು ವಿಚಾರ ತಿಳಿಸಿದರು. ವಿಚಾರ ತಿಳಿದು ಬೇಸರ ಆಗಿದೆ. ಈ ಹಿಂದೆ ಈ ರೀತಿ ಘಟನೆಗಳು ನಾಗಮಂಗಲದಲ್ಲಿ ನಡೆದಿವೆ. ಈ ಹಿಂದೆ ಎರಡು ಕಡೆಯವರ ಜೊತೆ ಮಾತನಾಡಿದ್ದೆವು. ಹೀಗಾಗಿ ಇಲ್ಲಿವರೆಗೆ ನಾಗಮಂಗಲ ಶಾಂತವಾಗಿತ್ತು. ನಿನ್ನೆ ದುರಾದೃಷ್ಟ, ಆಗಬಾರದಿತ್ತು, ಆಗಿದೆ. ತಕ್ಷಣ ಎಲ್ಲ ಅಧಿಕಾರಿಗಳು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಯಾವುದೇ ಪ್ರಾಣಹಾನಿ ಆಗದೇ ಇರೋ ಥರ ನಿಯಂತ್ರಿಸಿದ್ದಾರೆ. ಎರಡೂಕಡೆಯವರ ಅಂಗಡಿಗಳೂ ಡ್ಯಾಮೇಜ್ ಆಗಿವೆ. ಎಷ್ಟು ಹಾನಿಯಾಗಿದೆ ಎಂದು ವರದಿ ಕೊಡಲು ತಿಳಿಸಿದ್ದೇನೆ." ಎಂದು ಹೇಳಿದರು.
ನಾಗಮಂಗಲ ಈಗ ಶಾಂತ:"20 ಅಂಗಡಿಗಳು ಸುಟ್ಟು ಹೋಗಿವೆ. ಸಿಎಂ ಜೊತೆ ರಾತ್ರಿ ಕೂಡ ಮಾತನಾಡಿದ್ದೇನೆ. ಐಜಿ, ಎಡಿಜಿಪಿ ಸ್ಥಳದಲ್ಲೇ ಇದ್ದಾರೆ. ಈಗ ನಾಗಮಂಗಲ ಶಾಂತವಾಗಿದೆ. ಮತ್ತೆ ಇಂತಹ ವಿಚಾರ ಮರುಕಳಿಸದ ಹಾಗೇ ಪೊಲೀಸರ ನಿಯೋಜನೆ ಮಾಡಲಾಗಿದೆ. ನಾಗರೀಕರು ಆತಂಕ ಪಡಬೇಕಿಲ್ಲ. ಸಿಎಂ ಜೊತೆ ಸರ್ಕಾರದಿಂದ ಪರಿಹಾರ ಕೊಡಿಸಲು ಮಾತನಾಡುತ್ತೇನೆ. ವೈಯಕ್ತಿಕವಾಗಿ ಕೂಡ ಪರಿಹಾರವನ್ನು ನೀಡಲಿದ್ದೇನೆ. ಸರ್ಕಾರದ ಪರಿಹಾರ ನೋಡಿಕೊಂಡು ವೈಯಕ್ತಿಕ ಪರಿಹಾರ ನೀಡುತ್ತೇನೆ. ಇಂತಹ ಘಟನೆ ತುಂಬಾ ಬೇಸರ ತರಿಸಿದೆ. ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕಿದೆ. ಇಂತಹದ್ದನ್ನು ಸ್ವಲ್ಪ ಪ್ರಸಾರ ಮಾಡುವುದನ್ನು ಕಡಿಮೆ ಮಾಡಬೇಕು ಎಂದು ಮಾಧ್ಯಮಗಳಿಗೆ ವಿನಂತಿ ಮಾಡುತ್ತೇನೆ" ಎಂದರು.
’ದೇವರು ಅವರಿಗೆ ಒಳ್ಳೆಯದು ಮಾಡಲಿ’:ಯಾವುದೇ ಒಂದು ಕೋಮಿಗೆ ಪ್ರಾಮುಖ್ಯತೆ ಕೊಡುವ ಪ್ರಶ್ನೆ ಇಲ್ಲ. ಕುಮಾರಸ್ವಾಮಿ ಮಾಜಿ ಸಿಎಂ ಹಾಗೂ ಕೇಂದ್ರ ಮಂತ್ರಿಯಾಗಿದ್ದಾರೆ. ನನಗೆ ಎಷ್ಟು ಜವಾಬ್ದಾರಿ ಇದೆಯೋ ಅಷ್ಟೇ ಜವಾಬ್ದಾರಿ ಅವರಿಗೂ ಇದೆ ಎಂದು ನಾನು ಭಾವಿಸುತ್ತೇನೆ. ಇಂತಹದ್ದನ್ನು ಶಾಂತವಾಗಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಇದರ ಬಗ್ಗೆ ರಾಜಕೀಯವಾಗಿ ಹೇಳಿಕೆ ಕೊಡುತ್ತಾರೆಂದರೆ ದೇವರು ಅವರಿಗೆ ಒಳ್ಳೆಯದು ಮಾಡಲಿ."