ಶಿವಮೊಗ್ಗ:ರಸ್ತೆಯಲ್ಲಿ ಹೋಗುವಾಗ ಎದುರಾಗುವ ಗುಂಡಿಗಳು ಅದೆಷ್ಟು ಸಂದರ್ಭದಲ್ಲಿ ವಾಹನ ಸವಾರರಿಗೆ ಅಪಘಾತವಾಗುವಂತೆ ಮಾಡುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಗುಂಡಿಗಳನ್ನು ಕಂಡು ಹಿಡಿಶಾಪ ಹಾಕುವವರೇ ಹೆಚ್ಚು. ಇಂತಹ ಸವಾಲುಗಳನ್ನು ಅರಿತ ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಂಗಸಂಸ್ಥೆಯಾದ ಜವಾಹರ್ ಲಾಲ್ ನೆಹರು ರಾಷ್ಟ್ರೀಯ ಎಂಜಿನಿಯರಿಂಗ್ ಕಾಲೇಜಿನ (ಜೆಎನ್ಎನ್ಸಿಇ) ಸಿವಿಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ತಂಡ, 'ಕೋಲ್ಡ್ ಪಾಟ್ ಹೋಲ್ ಮಿಕ್ಸ್' ಕಂಡುಹಿಡಿದಿದ್ದಾರೆ. ಇದಕ್ಕೆ 'ಜೆಎನ್ಎನ್ಸಿಇ ಕೋಲ್ಡ್ ಪಾಟ್ ಹೋಲ್ ಮಿಕ್ಸ್' ಎಂದು ಹೆಸರಿಟ್ಟಿದ್ದಾರೆ. ಇದರ ಕುರಿತು ಪೇಟೆಂಟ್ ಸಹ ಪಡೆದುಕೊಂಡಿದ್ದಾರೆ.
ಆವಿಷ್ಕರಿಸಿರುವ ಈ ಕೋಲ್ಡ್ ಪ್ಯಾಚ್ ಮಿಶ್ರಣವನ್ನು ಗುಂಡಿ ಬಿದ್ದ ರಸ್ತೆಗಳಲ್ಲಿ ಸುರಿದು ಸಲೀಸಾಗಿ ಮುಚ್ಚಬಹುದಾಗಿದೆ. ಮಳೆಗಾಲ ಸೇರಿದಂತೆ ಯಾವುದೇ ಕಾಲದಲ್ಲಿಯೂ ದಟ್ಟ ವಾಹನ ಸಂಚಾರದ ನಡುವೆ ಈ ಮಿಶ್ರಣವನ್ನು ಗುಂಡಿ ಮುಚ್ಚಲು ಉಪಯೋಗಿಸಬಹುದು. ರಸ್ತೆಗೆ ಹಾಕಿದ ಕೆಲವೇ ಕ್ಷಣದಲ್ಲಿ ವಾಹನಗಳು ಮುಕ್ತವಾಗಿ ಸಂಚರಿಸಬಹುದಾಗಿದೆ.
ಸಾಮಾನ್ಯವಾಗಿ, ಡಾಂಬರ್ ಅನ್ನು ರಸ್ತೆ ಮತ್ತು ಹೆದ್ದಾರಿಗಳನ್ನು ನಿರ್ಮಿಸಲು ವ್ಯಾಪಕವಾಗಿ ಬಳಸಲಾಗುತ್ತದೆ. ಕಾರಣ ಈ ಡಾಂಬರಿಗೆ ಅಧಿಕ ಸಂಚಾರ ಹೊರ ತಡೆದುಕೊಳ್ಳುವ ಶಕ್ತಿ ಇರುತ್ತದೆ. ಅದಾಗಿಯೂ ತಾಪಮಾನ ಹೆಚ್ಚಾದಾಗ ಅಲ್ಲಲ್ಲಿ ವ್ಯತ್ಯಾಸ ಕಂಡುಬರುವುದು ಸಹಜ. ಇನ್ನು ಕೆಲವೆಡೆ ರಸ್ತೆಯ ಅಸಮರ್ಪಕ ವಿನ್ಯಾಸ, ವಾಹನಗಳ ದಟ್ಟಣೆ ಮತ್ತು ಭಾರವನ್ನು ತಡೆದುಕೊಳ್ಳದೇ ಹಾಳಾಗುವುದು, ಒಳಚರಂಡಿ ನೀರು ಹರಿದು ರಸ್ತೆಯ ಅಲ್ಲಲ್ಲಿ ಬಿರುಕು ಮೂಡುವುದು, ಜಲ್ಲಿ ಮಿಶ್ರಣ ಕಿತ್ತು ಬರುವುದು ಸಾಮಾನ್ಯ.
ಇಂತಹ ಗುಂಡಿಗಳ ದುರಸ್ತಿಗೆ ಪರಿಹಾರವೆಂದು ಹೇಳಿಕೊಳ್ಳುವ ಅನೇಕ ಬಿಟಮಿನ್ ಕೋಲ್ಡ್ ಡಾಂಬರ್ ಪ್ಯಾಚಿಂಗ್ ವಸ್ತುಗಳು ಮಾರುಕಟ್ಟೆಯಲ್ಲಿ ವರ್ಷಗಳಿಂದ ಇವೆ. ಆದರೆ ಈ ಉತ್ಪನ್ನಗಳು ಮಳೆ ಬೀಳುವ ಪ್ರದೇಶಗಳಿಗೆ ಹೆಚ್ಚು ಉಪಯುಕ್ತವಾಗಿಲ್ಲ. ಜೊತೆಯಲ್ಲಿ ಕೋಲ್ಡ್ ಡಾಂಬರ್ ಪ್ಯಾಚಿಂಗ್ ಸಾಮಗ್ರಿಗಳ ಸಂಗ್ರಹಣೆ, ದಾಸ್ತಾನು, ರಸ್ತೆಯಲ್ಲಿನ ತೇವಾಂಶ, ಮಿಶ್ರಣದ ಸಂದರ್ಭದಲ್ಲಿ ಅಸಮಂಜಸ ಕಲಬೆರಕೆ ಸೇರಿ ಅನೇಕ ಸಮಸ್ಯೆಗಳಿವೆ. ಬೆಲೆಯಲ್ಲಿಯೂ ದುಬಾರಿಯಾಗಿದೆ. ರಸ್ತೆಯಲ್ಲಿನ ಗುಂಡಿ ಮುಚ್ಚುವುದಕ್ಕೆ ಪ್ರಸ್ತುತ ಹಾಟ್ ಮಿಕ್ಸ್ (ಜಲ್ಲಿ ಡಾಂಬಾರು) ಬಳಸಲಾಗುತ್ತದೆ. ಆದರೆ, ಮಳೆಗಾಲದಲ್ಲಿ ಈ ಹಾಟ್ ಮಿಕ್ಸ್ಗಳನ್ನು ಬಳಸಿ ಗುಂಡಿ ಮುಚ್ಚಲು ಸಾಧ್ಯವಿಲ್ಲ. ಹೆಚ್ಚು ಕಾಲ ಬಾಳಿಕೆಯೂ ಬರುವುದಿಲ್ಲ.
ಈ ಎಲ್ಲಾ ಅಂಶಗಳನ್ನು ಮನಗಂಡ ಜೆಎನ್ಎನ್ಸಿಇ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ತಂಡ, ಡಾಂಬರ್ ಇಲ್ಲದ ಈ ಕೋಲ್ಡ್ ಪ್ಯಾಚ್ ಮಿಶ್ರಣವನ್ನು ಆವಿಷ್ಕರಿಸಿ ಸಾರ್ವಜನಿಕರಿಗೆ ಅರ್ಪಿಸಿದೆ. ಇದು ಸಿದ್ಧಪಡಿಸಿದ ಮಿಶ್ರಣವಾಗಿದ್ದು, ಮಳೆಗಾಲ ಸೇರಿದಂತೆ ಯಾವುದೇ ಕಾಲದಲ್ಲಿಯಾದರೂ, ದಟ್ಟ ವಾಹನ ಸಂಚಾರದ ನಡುವೆಯೂ ಈ ಮಿಶ್ರಣವನ್ನು ಗುಂಡಿ ಮುಚ್ಚಲು ಉಪಯೋಗಿಸಬಹುದು. ನಾವೀನ್ಯ ಕಾಯಕಲ್ಪ ಇದಾಗಿದ್ದು, ಇದರಿಂದ ಹಲವು ಅನುಕೂಲಗಳುಂಟು.
ಕೋಲ್ಡ್ ಮಿಕ್ಸ್ ಹೇಗೆ ವಿಭಿನ್ನವಾಗಿದೆ:
- ಹಾಟ್ ಮಿಕ್ಸ್ಗಳನ್ನು ಮಳೆಗಾಲ ಹೊರತಾದ ಕಾಲಾವಧಿಯಲ್ಲಿ ಬಳಸಬಹುದು. ಆದರೆ, ಕೋಲ್ಡ್ ಮಿಕ್ಸ್ ಯಾವುದೇ ಕಾಲದಲ್ಲಿ ಬೇಕಾದರೂ ಬಳಸಬಹುದು.
- ಬೇರೆಯ ಕಂಪನಿಗಳಲ್ಲಿ ಲಭ್ಯವಿರುವ ಕೋಲ್ಡ್ ಮಿಕ್ಸ್ ಮಾದರಿಯ ಪರಿಕರಗಳು 50 ಕೆಜಿಗೆ 1700 ರೂ. ಇದೆ. ಆದರೆ, ಈ ನೂತನ ಆವಿಷ್ಕಾರಕ್ಕೆ ಕೇವಲ 800 ರೂ ಆಗಲಿದೆ.
- ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಬಾಳಿಕೆ ಬರುವ ಈ ನೂತನ ಉತ್ಪನ್ನ ಬಳಸಿ ಗುಂಡಿ ಮುಚ್ಚಬಹುದು.
- ಹಾಟ್ ಮಿಕ್ಸ್ ಬಳಸಿ ಗುಂಡಿ ಮುಚ್ಚಲು ಬೇಕಾಗುವಂತೆ ಹೆಚ್ಚು ಮಾನವ ಸಂಪನ್ಮೂಲ, ಇತರೆ ಯಂತ್ರೋಪಕರಣಗಳು ಬೇಕಾಗಿಲ್ಲ.
ಪೇಟೆಂಟ್ ಪಡೆದುಕೊಂಡ ಕಾಲೇಜು:ಸುಮಾರು ನಾಲ್ಕು ವರ್ಷಗಳ ನಿರಂತರ ಸಂಶೋಧನೆ ಪ್ರಯತ್ನದ ನಂತರ ಉತ್ಪನ್ನದ ಪೇಟೆಂಟ್ ಪ್ರಕ್ರಿಯೆಯಲ್ಲಿ ಈಗಾಗಲೇ ಪೇಟೆಂಟ್ ಪ್ರಕಟಗೊಂಡಿದ್ದು, ಮುಂದಿನ ವರ್ಷದೊಳಗೆ ಪೇಟೆಂಟ್ ದೊರೆಯುವ ನಿರೀಕ್ಷೆಯಿದೆ.
ಹೆದ್ದಾರಿ ಪ್ರಾಧಿಕಾರದೊಂದಿಗೆ ಒಡಂಬಡಿಕೆ:2021ರಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಇದರಿಂದ ಉತ್ಪನ್ನ ಸೇರಿದಂತೆ ಸಿವಿಲ್ ವಿಭಾಗದ ಅನೇಕ ಸಂಶೋಧನಾ ಚಟುವಟಿಕೆಗಳಿಗೆ ಪೂರಕ ಶಕ್ತಿ ದೊರೆತಂತಾಗಿತ್ತು.