ಕರ್ನಾಟಕ

karnataka

ETV Bharat / state

ಗಾಳ ಹಾಕಿ ಮೀನು ಹಿಡಿಯಲು ಬಂದ ಅಂತಾರಾಜ್ಯ ಸ್ಪರ್ಧಿಗಳು ; 4 ಗಂಟೆಯಲ್ಲಿ 50 ಮತ್ಸ್ಯ ಶಿಕಾರಿ - FISH HUNTING COMPETITION

ಕಾರವಾರದ ಬೈತಖೋಲ್ ಬಳಿ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆಯನ್ನ ಆಯೋಜಿಸಲಾಗಿತ್ತು.

fish-hunting
ಮೀನು ಹಿಡಿಯುತ್ತಿರುವುದು (ETV Bharat)

By ETV Bharat Karnataka Team

Published : Feb 9, 2025, 11:00 PM IST

ಕಾರವಾರ (ಉತ್ತರ ಕನ್ನಡ) : ಸಾಮಾನ್ಯವಾಗಿ ಈಜು ಸ್ಪರ್ಧೆ, ದೋಣಿ ಚಲಾಯಿಸುವ ಸ್ಪರ್ಧೆಗಳು ಕರಾವಳಿ ಭಾಗದಲ್ಲಿ ಆಗಾಗ ನಡೆಯುತ್ತಲೇ ಇರುತ್ತವೆ. ಆದರೆ, ಸಾಂಪ್ರದಾಯಿಕ ಮೀನುಗಾರಿಕೆಯನ್ನು ಉಳಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರವಾರದ ಬೈತಖೋಲ್ ಬಳಿ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಗೆ ರಾಜ್ಯ ಅಂತಾರಾಜ್ಯದ ಸ್ಪರ್ಧಾಳುಗಳು ಭಾಗವಹಿಸಿದ್ದರು. ಇದರಲ್ಲಿ ಸ್ಪರ್ಧಿಯೊಬ್ಬರು 4 ಗಂಟೆ ಸಮಯದಲ್ಲಿ ಬರೋಬ್ಬರಿ 50 ಮೀನುಗಳನ್ನು ಹಿಡಿದು ಎಲ್ಲರ ಗಮನ ಸೆಳೆದಿದ್ದಾರೆ.

ಹೌದು, ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬೈತಖೋಲ್​ನಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಉತ್ತೇಜಿಸುವ ನಿಟ್ಟಿನಲ್ಲಿ ಮತ್ತು ಗಾಳದ ಮೀನು ಶಿಕಾರಿ ಪದ್ಧತಿ ತಿಳಿಸುವ ನಿಟ್ಟಿನಲ್ಲಿ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆಯನ್ನು ಬೈತಖೋಲ್ ಯುವ ಮೀನುಗಾರರ ಸಂಘರ್ಷ ಸಮಿತಿಯಿಂದ ಏರ್ಪಡಿಸಲಾಗಿತ್ತು.

ಮೀನುಗಾರರ ಮುಖಂಡ ವೆಂಕಟೇಶ ತಾಂಡೇಲ್ ಮಾತನಾಡಿದರು (ETV Bharat)

ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಮಾತ್ರವಲ್ಲದೆ ದೂರದ ಪುಣೆ, ಗೋವಾದಿಂದಲೂ ಸೇರಿ ಒಟ್ಟು 47 ಸ್ಪರ್ಧಾಳುಗಳು ಆಗಮಿಸಿದ್ದರು. ಒಟ್ಟು 4 ತಾಸುಗಳ ಕಾಲ ಮೀನು ಶಿಕಾರಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ಅವಧಿಯಲ್ಲಿ ಅತಿ ಹೆಚ್ಚು ಮೀನುಗಳನ್ನು ಹಿಡಿದ ಮೂವರಿಗೆ ನಗದು ಬಹುಮಾನ ಕೂಡ ಇಡಲಾಗಿತ್ತು. ಅದರಂತೆ ಮುಂಜಾನೆಯಿಂದಲೇ ಗಾಳ ಹಿಡಿದು ಬಂದಿದ್ದ ಸ್ಪರ್ಧಾಳುಗಳು ಬ್ರೇಕ್ ವಾಟರ್ ಬಳಿ ಕುಳಿತು ನಾಲ್ಕು ಗಂಟೆಗಳ ಕಾಲ ಶಾಂತತೆಯಿಂದ ಮೀನು ಬೇಟೆ ನಡೆಸಿದರು.

ಕಾರವಾರದಲ್ಲಿ ಎರಡನೇ ಬಾರಿಗೆ ಈ ಸ್ಪರ್ಧೆ ಆಯೋಜಿಸಿದ್ದರಿಂದ ಕಳೆದ ಬಾರಿಗಿಂತಲೂ ಹೆಚ್ಚಿನ ಸ್ಪರ್ಧಾಳುಗಳು ಆಗಮಿಸಿದ್ದರು. ಈ‌ ಹಿಂದೆ ಗಾಳದ ಮೀನಿನ ಶಿಖಾರಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿತ್ತು. ಕಾಲಕ್ರಮೇಣ ಬದಲಾದ ವ್ಯವಸ್ಥೆಗೆ ಹೊಂದಿಕೊಂಡ ಮೀನುಗಾರರು ಗಾಳದ‌ ಮೀನಿನ ಶಿಖಾರಿ ಮರೆಯತೊಡಗಿದ್ದರು. ಈಗ ಸ್ಪರ್ಧೆ ಮೂಲಕ ಗಾಳದ ಮೀನುಗಾರಿಕೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಕರಾವಳಿ ಮಟ್ಟಿಗೆ ಇದು ಅಪರೂಪದ ಸ್ಪರ್ಧೆಯಾಗಿದ್ದು, ಈ‌ ಸ್ಪರ್ಧೆಯಲ್ಲಿ ಕೇವಲ ಮೀನುಗಾರರು ಅಷ್ಟೆ ಅಲ್ಲದೆ ಬೇರೆ ಬೇರೆ ಸಮುದಾಯದವರು ಕೂಡಾ ಭಾಗವಹಿಸಿ ಗಮನ ಸೆಳೆದರು. ಈ ವೇಳೆ ಕೆಲವರು ಒಂದು ಮೀನನ್ನೂ ಹಿಡಿಯಲಾಗದೆ ಅರ್ಧಕ್ಕೆ ಎದ್ದು ನಡೆದರೆ, ಇನ್ನು ಕೆಲವರು 10 ರಿಂದ 20 ಮೀನುಗಳನ್ನು ಹಿಡಿದು ಖುಷಿಪಟ್ಟರು.

ಮತ್ಸ್ಯ ಶಿಕಾರಿ (ETV Bharat)

ಈ ಬಗ್ಗೆ ಮೀನುಗಾರರ ಮುಖಂಡ ವೆಂಕಟೇಶ ತಾಂಡೇಲ್ ಅವರು ಮಾತನಾಡಿ, ''ಇದೊಂದು ಸಾಂಪ್ರದಾಯಿಕ ಮೀನುಗಾರಿಕೆ. ಹಿಂದಿನ ಕಾಲದಲ್ಲಿ ಗಾಣ ಹಾಕಿ ಮೀನು ಹಿಡಿದು ಜೀವನ ಮಾಡುತ್ತಿದ್ದರು. ಕಾಲಕ್ರಮೇಣ ಬಲೆಗಳು ಬಂದಿದ್ದರಿಂದ ಈ ಸಾಂಪ್ರದಾಯಿಕ ಮೀನುಗಾರಿಕೆ ಕಣ್ಮರೆಯಾಗುತ್ತಿದೆ. ಇದನ್ನ ನೆನಪಿಸುವ ಸಲುವಾಗಿ ಸ್ಪರ್ಧೆಯನ್ನ ಆಯೋಜಿಸಿದ್ದೇವೆ'' ಎಂದರು.

ಸ್ಪರ್ಧಾಳು ಅರವಿಂದ್ ಮಾತನಾಡಿ, ''ಕಾರವಾರದಲ್ಲಿ ಗಾಣ ಹಾಕಿ ಮೀನು ಹಿಡಿಯುವ ಸ್ಪರ್ಧೆ ಆಯೋಜಿಸಿದ್ದಾರೆ. ಈ ರೀತಿ ಸ್ಪರ್ಧೆ ಬೇರೆ ಎಲ್ಲಿಯೂ ನಡೆಯಲ್ಲ. ಒಳ್ಳೆಯ ಅನುಭವ. ನಾಲ್ಕು ಗಂಟೆ ಸಮಯ ಕೊಟ್ಟಿದ್ದಾರೆ. ಮೊದಲ ಬಹುಮಾನ 5000 ಎಂದಿದ್ದಾರೆ'' ಎಂದು ತಿಳಿಸಿದರು.

ಮೀನು ಹಿಡಿದಿರುವುದು (ETV Bharat)

ಅಂತಿಮವಾಗಿ ಸ್ಪರ್ಧೆ ಮುಗಿದ ಬಳಿಕ ಕಾರವಾರ ಬೆಳೂರಿನ ತಿಲಕ್ ಗೌಡ ಅವರು ಅತಿ ಹೆಚ್ಚು 50 ಮೀನುಗಳನ್ನು ಹಿಡಿದು ಪ್ರಥಮ ಸ್ಥಾನ ಪಡೆದುಕೊಂಡರು. ದ್ವಿತೀಯ ಬಹುಮಾನವನ್ನು 36 ಮೀನುಗಳನ್ನು ಹಿಡಿದಿದ್ದ ಗಣೇಶ ಗುನಗಿ ಹಾಗೂ ಬಿಣಗಾದ ನಿರಂಜನ ಗೌಡ ಅವರು 30 ಮೀನು ಹಿಡಿದು ತೃತೀಯ ಸ್ಥಾನವನ್ನು ಪಡೆದುಕೊಂಡರು. ಕಾಳೇರ, ತಾಂಬೂಸ್, ಕುರುಡೆ ಸೇರಿದಂತೆ ಹಲವು ಬಗೆಯ ಮೀನುಗಳನ್ನು ಸ್ಪರ್ಧಾಳುಗಳು ಹಿಡಿದರು. ಈ ಮೀನುಗಳನ್ನು ಸ್ಪರ್ಧಾಳುಗಳೇ ಕೊಂಡೊಯ್ದರು.

ಒಟ್ಟಾರೆ ತೀರಾ ತಾಳ್ಮೆಯ ಸ್ಪರ್ಧೆ ಇದಾಗಿದ್ದು, ಮೀನು ಸಿಗುವವರೆಗೂ ಕಾಯ್ದು ಸ್ಪರ್ಧಾಳುಗಳು ಮೀನಿನ ಶಿಖಾರಿ ಮಾಡಿದ್ರು. ಅಪರೂಪದ ಈ ಸ್ಪರ್ಧೆ ಜನಮೆಚ್ಚುಗೆಗೂ ಪಾತ್ರವಾಯಿತು.

ಇದನ್ನೂ ಓದಿ :ಕಡಲಮಕ್ಕಳಿಗೆ ಕೈಗೂಡದ ಮತ್ಸ್ಯಬೇಟೆ: ಅವೈಜ್ಞಾನಿಕ ಮೀನುಗಾರಿಕೆಯಿಂದ ಅವಧಿಗೂ ಮುನ್ನ ಬೋಟುಗಳ ಲಂಗರು - FISH FAMINE

ABOUT THE AUTHOR

...view details