ಬೆಂಗಳೂರು:15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಆವೃತ್ತಿಗೆ ಇಂದು ಸಂಜೆ ಸಿಎಂ ಸಿದ್ದರಾಮಯ್ಯ ವಿಧಾನಸೌಧದ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ವಿಧ್ಯುಕ್ತ ಚಾಲನೆ ನೀಡಿದ್ದಾರೆ. ಇದಕ್ಕೂ ಮುನ್ನ ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ನಟ ಶಿವರಾಜ್ ಕುಮಾರ್, ಅಂತಾರಾಷ್ಟ್ರೀಯ ಚಿತ್ರೋತ್ಸವದ ರಾಯಭಾರಿ ನಟ ಡಾಲಿ ಧನಂಜಯ್, ಸಿನಿಮಾ ನಿರ್ದೇಶಕ ಜಬ್ಬಾರ್ ಪಟೇಲ್, ಚೆಕ್ ರಿಪಬ್ಲಿಕ್ ದೇಶದ ಚಿತ್ರ ವಿಮರ್ಶಕ ಮೆಯೆರಾ ಲಾಂಗೆರೊವಾ, ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ವಿದ್ಯಾಶಂಕರ್, ನಟಿ ಆರಾಧನಾ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಚಲನಚಿತ್ರ ಅಕಾಡೆಮಿಯ ನಿಯೋಜಿತ ಅಧ್ಯಕ್ಷ ಸಾಧು ಕೋಕಿಲಾ, ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್ ಸೇರಿ ಹಲವು ಗಣ್ಯರು ಇದ್ದರು.
ಸಿಎಂ ಸಿದ್ದರಾಮಯ್ಯ ಮಾತನಾಡಿ, ಮನುಷ್ಯ ಮನುಷ್ಯನನ್ನು ಪ್ರೀತಿಸುವ ಸಂಸ್ಕೃತಿಯನ್ನು ಪಾಲಿಸಿದಾಗ ಜಗತ್ತಲ್ಲಿ ಶಾಂತಿ ನೆಲೆಸುತ್ತದೆ. ಸಿನಿಮಾ ಬಹಳ ಪ್ರಭಾವಿ ಮಾಧ್ಯಮ. ನೋಡುಗರ ಮನಸ್ಸು, ಆಲೋಚನೆಯ ಮೇಲೆ ಪ್ರಭಾವ ಬೀರುವ ಶಕ್ತಿ ಅದಕ್ಕಿದೆ. ಸಿನಿಮಾಗಳ ಮೂಲಕ ದೇಶದ ಒಳಗಿನ, ಇತರೆ ದೇಶಗಳ ಜನರ ಸಂಸ್ಕೃತಿಯನ್ನು ಅರಿಯುವ ಮತ್ತು ಆ ಮೂಲಕ ನಮ್ಮ ಮಾನವೀಯ ಸಂಸ್ಕೃತಿಯನ್ನು ವಿಸ್ತರಿಸಿಕೊಳ್ಳಲು ನೆರವಾಗುತ್ತದೆ. ಇದಕ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ವೇಗವರ್ಧಕವಾಗಿ ಕೆಲಸ ಮಾಡುತ್ತದೆ ಎಂದರು.
ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಇತರೆ ದೇಶಗಳ ಸಂವಿಧಾನದಲ್ಲಿಲ್ಲದ ಸಾಮಾಜಿಕ ನ್ಯಾಯದ ಮೌಲ್ಯಗಳಿವೆ. ಅಂಬೇಡ್ಕರ್ ಮತ್ತು ಇವರ ಮೌಲ್ಯಗಳ ಕುರಿತಾದ ಸಿನಿಮಾಗಳಿಗೆ ಅಗತ್ಯವಾದ ಎಲ್ಲಾ ರೀತಿಯ ನೆರವನ್ನು ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಘೋಷಿಸಿದರು.
ಕುವೆಂಪು ಅವರ ವಿಶ್ವ ಮಾನವ ಸಂಸ್ಕೃತಿಯನ್ನು ವಿಶ್ವದಲ್ಲಿ ಹೆಚ್ಚೆಚ್ಚು ಪಾಲಿಸುವಂಥ ವಾತಾವರಣ ಸೃಷ್ಟಿಯಾಗಬೇಕು. ಇದಕ್ಕೆ ವಿಶ್ವ ಸಿನಿಮಾಗಳು ನೆರವಾಗುತ್ತವೆ. 2019ರಿಂದ ಉತ್ತಮ ಸಿನಿಮಾಗಳ ಆಯ್ಕೆಗೆ ಸಮಿತಿ ರಚಿಸಿದ್ದೇವೆ. 2019ರಿಂದ ಚಲನಚಿತ್ರ ಪ್ರಶಸ್ತಿಗಳನ್ನು ಕೊಟ್ಟಿಲ್ಲ. ಬಾಕಿ ಉಳಿದಿರುವ ವರ್ಷಗಳ ಉತ್ತಮ ಸಿನಿಮಾಗಳ ಆಯ್ಕೆಗೆ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿ ವರದಿ ಕೊಟ್ಟ ತಕ್ಷಣ ಪ್ರಶಸ್ತಿಗಳನ್ನು ಘೋಷಿಸಲಾಗುವುದು ಎಂದರು.