ಬಾಗಲಕೋಟೆ:ಜಿಲ್ಲೆಯಲ್ಲಿ ಬುಧವಾರ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಭವನದಲ್ಲಿ ವಿಡಿಯೋ ವರ್ಚ್ಯುವಲ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪಿಎಂ-ಸೂರಜ್ ನ್ಯಾಷನಲ್ ಪೋರ್ಟಲ್ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಗಣ್ಯರಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಸಂಸದ ಪಿ.ಸಿ.ಗದ್ದಿಗೌಡರ ಪಾಲ್ಗೊಂಡಿದ್ದರು.
ಏನಿದು ಪಿಎಂ-ಸೂರಜ್ ನ್ಯಾಷನಲ್ ಪೋರ್ಟಲ್?: ‘ಪ್ರಧಾನ ಮಂತ್ರಿ ಸಾಮಾಜಿಕ್ ಉತ್ಥಾನ್ ಮತ್ತು ರೋಜ್ಗಾರ್ ಆಧಾರಿತ್ ಜನಕಲ್ಯಾಣ್' (ಪಿಎಂ-ಸೂರಜ್) ಎಂಬ ರಾಷ್ಟ್ರೀಯ ಪೋರ್ಟಲ್ ಇದಾಗಿದೆ. ಈ ಒಂದೇ ಪೋರ್ಟಲ್ನಲ್ಲಿ ಕೇಂದ್ರ ಸರ್ಕಾರದ ಎಲ್ಲಾ ಯೋಜನೆ, ಸೇವೆಗಳ ಕುರಿತು ಮಾಹಿತಿ ಹಾಗೂ ಸಾಲ ಕೂಡ ಸುಲಭವಾಗಿ ಜನರು ಪಡೆಯಬಹುದಾಗಿದೆ. ಮುಖ್ಯವಾಗಿ ಈ ಪೋರ್ಟಲ್ ದೇಶದಲ್ಲಿ ವಂಚಿತ ಸಮುದಾಯ, ಹಿಂದುಳಿದ ವರ್ಗ ಹಾಗೂ ಸಫಾಯಿ ಕರ್ಮಚಾರಿಗಳಿಗೆ ಸಾಮಾಜಿಕ ನ್ಯಾಯ ನೀಡುವ ಉದ್ದೇಶ ಹೊಂದಿದೆ. ಜತೆಗೆ ಜನರ ಉದ್ದಿಮೆಗಳಿಗೆ ಸಾಲದ ನೆರವು ನೀಡುತ್ತದೆ.
ಈ ಕುರಿತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, "ದೇಶ ಅಭಿವೃದ್ಧಿ ಹೊಂದಲು ಪ್ರತಿಯೊಬ್ಬ ನಾಗರಿಕನ ಕೊಡುಗೆ ಅಪಾರವಾಗಿದೆ. ಉದ್ದಿಮೆಗಳಿಗೆ ಸಾಲದ ನೆರವು ನೀಡಿ ರಾಷ್ಟ್ರ ವ್ಯಾಪಿ ಔಟ್‍ರೀಚ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಇದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಿಎಂ-ಸೂರಜ್ ವೆಬ್ ಪೋರ್ಟಲ್ ಅನಾವರಣಗೊಳಿಸಿದ್ದಾರೆ. ದೇಶದ ವಂಚಿತ ಸಮುದಾಯಗಳ ಸಬಲೀಕರಣ ಮತ್ತು ಉತ್ತೇಜನಕ್ಕಾಗಿ ಪ್ರಧಾನಮಂತ್ರಿ ಅವರು ದೇಶಾದ್ಯಂತ 500ಕ್ಕೂ ಹೆಚ್ಚು ಜಿಲ್ಲೆಗಳೊಂದಿಗೆ ನೇರವಾಗಿ ಸಂಪರ್ಕ ಸಾಧಿಸಿದ್ದಾರೆ. ಮತ್ತು ಸಂವಾದ ನಡೆಸಿ ಸಂಪರ್ಕ ಹೊಂದಿರುವುದು ಸಂತೋಷದ ವಿಷಯವಾಗಿದೆ. ಮಹಿಳೆಯರಿಗಾಗಿ ವಯೋಸ್ತ್ರೀ ಯೋಜನೆ ಜಾರಿಗೆ ತಂದು ನಿರ್ಗತಿಕ ಅಶಕ್ತ, ವಯೋವೃದ್ಧ ಮಹಿಳೆಯರ ರಕ್ಷಣೆಗಾಗಿ ಪಣತೊಟ್ಟಿದೆ" ಎಂದು ತಿಳಿಸಿದರು.