ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರಾಣಿಗಳ ಆರೈಕೆ ಮತ್ತು ನಿರ್ವಹಣೆ (Animal Care and Management) ವಿಷಯದಲ್ಲಿ 10 ತಿಂಗಳ ಡಿಪ್ಲೊಮಾ ಕೋರ್ಸ್ ಆರಂಭಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಾತ್ವಿಕ ಅನುಮೋದನೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಇಂದು ಮೃಗಾಲಯ ಪ್ರಾಧಿಕಾರದ ಸಭೆ ನಡೆಸಿದ ಸಚಿವರು, ಮೃಗಾಲಯಗಳಲ್ಲಿ ವನ್ಯಜೀವಿಗಳ ಆರೈಕೆಗೆ ನುರಿತ ಸಿಬ್ಬಂದಿಯ ಅಗತ್ಯವಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ಬೆಂಗಳೂರಿನ ಲೈಫ್ ಸೈನ್ಸ್ ಎಜುಕೇಶನ್ ಟ್ರಸ್ಟ್ ಸಹಯೋಗದಲ್ಲಿ ಈ ಕೋರ್ಸ್ ಆರಂಭಿಸಲು ತಾತ್ವಿಕ ಅನುಮೋದನೆ ಕೊಟ್ಟಿದ್ದಾರೆ.
ಈ ಡಿಪ್ಲೊಮಾ ಪದವಿ ಪಡೆದವರಿಗೆ ಉದ್ಯೋಗಾವಕಾಶಗಳು ಲಭಿಸುವಂತಿರಬೇಕು. ದೀರ್ಘಕಾಲ ಈ ಕೋರ್ಸ್ ಪ್ರಾಮುಖ್ಯತೆ ಪಡೆಯುವಂತಿರಬೇಕು, ಈ ನಿಟ್ಟಿನಲ್ಲಿ ಪಠ್ಯಕ್ರಮ ಮತ್ತು ಪ್ರಾಯೋಗಿಕ ತರಬೇತಿ ಕಾರ್ಯಕ್ರಮ ರೂಪಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸಾಧಕ-ಬಾಧಕ ಚರ್ಚಿಸಿ ಮುಂದಿನ ಸಭೆಯಲ್ಲಿ ಪ್ರಸ್ತಾವನೆ ಮಂಡಿಸಲು ಸಚಿವರು ಸೂಚಿಸಿದರು.