ಬೆಂಗಳೂರು: ರಾಜ್ಯದಲ್ಲಿ ತಾಯಿ ಮತ್ತು ಮಕ್ಕಳ ಆರೈಕೆಗಾಗಿ ಇನ್ಫೋಸಿಸ್ ಫೌಂಡೇಶನ್ನ ಸಿ.ಎಸ್.ಆರ್ ಫಂಡ್ ನೆರವಿನೊಂದಿಗೆ ಆರೋಗ್ಯ ಇಲಾಖೆ ಎರಡು ನೂತನ ತಂತ್ರಜ್ಞಾನಗಳನ್ನ ಸರ್ಕಾರಿ ಆಸ್ಪತ್ರೆಗಳಲ್ಲಿ ಅನುಷ್ಠಾನಗೊಳಿಸುತ್ತಿದೆ. ನೂತನ ಯೋಜನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬುಧವಾರದಂದು ಇನ್ಫೋಸಿಸ್ ಫೌಂಡೇಶನ್ ಹಾಗೂ ಸಿ. ಕ್ಯಾಂಪ್ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು.
ಈ ವೇಳೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಪ್ರಾಯೋಗಿಕವಾಗಿ 3 ಜಿಲ್ಲೆಗಳಲ್ಲಿ ತಂತ್ರಜ್ಞಾನ ಅಳವಡಿಕೆ ಕಾರ್ಯ ಆರಂಭವಾಗಿದೆ. ಧಾರವಾಡ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಜಿಲ್ಲಾಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 'fetal monitoring technology' ಮತ್ತು ''CPAP'' ತಂತ್ರಜ್ಞಾನಗಳನ್ನು ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.
ಹಂತ ಹಂತವಾಗಿ ನಾಲ್ಕು ವರ್ಷಗಳಲ್ಲಿ ಒಟ್ಟು 8 ಜಿಲ್ಲೆಗಳ ಜಿಲ್ಲಾಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಂತ್ರಜ್ಞಾನ ಅಳವಡಿಕೆ ಕಾರ್ಯ ನೆಡೆಯಲಿದೆ. ಈ ತಂತ್ರಜ್ಞಾನಗಳ ಅಳವಡಿಕೆಗೆ ಇನ್ಫೋಸಿಸ್ ಫೌಂಡೇಶನ್ ಸಿಎಸ್ಆರ್ ಯೋಜನೆಯಡಿ ಹಣಕಾಸಿನ ನೆರವು ಒದಗಿಸಲು ಮುಂದೆ ಬಂದಿದ್ದು, ಯೋಜನೆ ಅನುಷ್ಠಾನದಲ್ಲಿ ಸಿ - ಕ್ಯಾಂಪ್ ಅಗತ್ಯ ವೇದಿಕೆ ಕಲ್ಪಿಸಿದೆ. ಎರಡು ತಂತ್ರಜ್ಞಾನಗಳು ತಾಯಿ ಮತ್ತು ಮಕ್ಕಳ ಆರೋಗ್ಯದ ಜೊತೆಗೆ, ನವಜಾತ ಶಿಶುಗಳ ಆರೋಗ್ಯ ರಕ್ಷಣೆಯಲ್ಲಿ ಸಹಕಾರಿಯಾಗಿವೆ ಎಂದು ತಿಳಿಸಿದರು.