ಉತ್ತರ ಕನ್ನಡದಲ್ಲಿ ಅಕ್ರಮ ಜಲಸಾಹಸಿ ಚಟುವಟಿಕೆ, ಪ್ರತಿಕ್ರಿಯೆ (ETV Bharat) ಕಾರವಾರ: ಪ್ರವಾಸೋದ್ಯಮಕ್ಕೆ ಹೆಸರಾಗಿರುವ ಉತ್ತರ ಕನ್ನಡ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿನ ಕಡಲತೀರಗಳಲ್ಲಿ ಜಲಸಾಹಸಿ ಚಟುವಟಿಕೆಗಳು ಹೆಚ್ಚಾಗಿದ್ದು, ಉದ್ಯಮವಾಗಿ ಮಾರ್ಪಾಡಾಗಿದೆ. ಆದರೆ ಅದೆಷ್ಟೋ ಕಡೆಗಳಲ್ಲಿ ಇಂಥ ಜಲಸಾಹಸಿ ಚಟುವಟಿಕೆಗಳು ಅಕ್ರಮವಾಗಿಯೂ ನಡೆಯುತ್ತಿವೆ. ಇದು ಪ್ರವಾಸಿಗರ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಗಳಿವೆ.
ಜಿಲ್ಲೆಯ ಕಡಲತೀರಗಳು ಪ್ರವಾಸಿಗರ ಪಾಲಿಗೆ ಹಾಟ್ಸ್ಪಾಟ್ ಕೇಂದ್ರಗಳಾಗಿವೆ. ಇಲ್ಲಿ ನಡೆಸುತ್ತಿರುವ ಹತ್ತಾರು ಜಲಸಾಹಸಿ ಚಟುವಟಿಕೆಗಳು ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುತ್ತಿವೆ. ಮುರುಡೇಶ್ವರ, ಗೋಕರ್ಣ, ಹೊನ್ನಾವರ, ಕಾರವಾರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಬೋಟ್ ಪೋಲಿಂಗ್, ಸ್ಪೀಡ್ ಬೋಟ್, ಬನಾನಾ ಬೋಟ್, ಕಯಾಕಿಂಗ್ ಸೇರಿದಂತೆ ಹತ್ತು ಹಲವು ಜಲಸಾಹಸಿ ಚಟುವಟಿಕೆಗಳು ದೇಶದ ನಾನಾ ಭಾಗಗಳಿಂದ ಪ್ರವಾಸಿಗರನ್ನು ವರ್ಷದುದ್ದಕ್ಕೂ ಆಕರ್ಷಿಸುತ್ತಿವೆ.
ಆದರೆ ಕೆಲವರು ಅಧಿಕೃತ ಪರವಾನಗಿಯೊಂದಿಗೆ ಈ ಉದ್ಯಮ ನಡೆಸುತ್ತಿದ್ದರೆ, ಹಲವರು ಯಾವುದೇ ಅನುಮತಿ ಪಡೆಯದೇ ತೊಡಗಿಸಿಕೊಂಡಿದ್ದಾರೆ. ಹೀಗೆ ಅನುಮತಿ ಇಲ್ಲದೇ ಗೋಕರ್ಣದ ತದಡಿ ಮೂಡಂಗಿಯಿಂದ ಇತ್ತೀಚೆಗೆ ಬೋಟ್ ರೈಡಿಂಗ್ಗೆ ಪ್ರವಾಸಿಗರನ್ನು ಕರೆದೊಯ್ದಿದ್ದ ಬೋಟ್ ಆಕಸ್ಮಿಕವಾಗಿ ಪಲ್ಟಿಯಾಗಿ ಸುಮಾರು 42 ಪ್ರವಾಸಿಗರು ಅಪಾಯಕ್ಕೆ ಸಿಲುಕಿದ್ದರು. ಆದರೆ ಲೈಫ್ ಜಾಕೆಟ್ ಧರಿಸಿದ್ದ ಕಾರಣ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಜಿಲ್ಲೆಯ ಹಲವೆಡೆ ಇಂತಹ ಅನಧಿಕೃತ ಜಲಸಾಹಸಿ ಚಟುವಟಿಕೆಗಳು ನಡೆಯುತ್ತಿದೆ.
ರಾಜ್ಯದ ನಾನಾ ಭಾಗಗಳಿಂದ ಜಿಲ್ಲೆಯ ಜಲಸಾಹಸಿ ಕ್ರೀಡೆಗಳತ್ತ ಆಕರ್ಷಿತರಾಗುವ ಕಾರಣ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಅನಧಿಕೃತವಾಗಿ ಇಂತಹ ಚಟುವಟಿಕೆಗಳನ್ನು ಬಂದ್ ಮಾಡಿಸಿ ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಮಂಗಳೂರು: ಕೆನಡಾ ವೀಸಾ ಮಾಡಿಕೊಡುವುದಾಗಿ ನಂಬಿಸಿ ₹15 ಲಕ್ಷ ವಂಚನೆ - Visa Fraud Case
ಹೋಂ ಸ್ಟೇ, ಜಲಸಾಹಸಿ ಚಟುವಟಿಕೆ ಸೇರಿದಂತೆ ಇನ್ನಿತರೆ ಪ್ರವಾಸಿ ಚಟುವಟಿಕೆಗಳನ್ನು ನಡೆಸುವವರಿಗೆ ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ನಿಯಮಗಳನ್ನು ರೂಪಿಸಿ ಪ್ರವಾಸಿಗರ ಸುರಕ್ಷತೆಯನ್ನು ಮುಖ್ಯವಾಗಿರಿಸಿಕೊಂಡು ಕೆಲವು ಷರತ್ತುಗಳೊಂದಿಗೆ ಪರವಾನಗಿ ನೀಡುತ್ತಿದೆ. ಪರವಾನಗಿ ನೀಡುವಾಗ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ತುರ್ತು ಚಿಕಿತ್ಸೆ, ಸ್ವಿಮ್ಮಿಂಗ್, ಡ್ರೈವಿಂಗ್ ಮಾಹಿತಿ ಇದ್ದವರಿಗೆ ಆದ್ಯತೆ ನೀಡಲಾಗುತ್ತದೆ. ಆದರೆ ಜಿಲ್ಲೆಯಲ್ಲಿ ಕೆಲವೆಡೆ ಅನಧಿಕೃತವಾಗಿ ಅಕ್ರಮವಾಗಿ ಜಲಸಾಹಸಿ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಕೂಡಲೇ ಅಂತವರು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡು ಪರವಾನಗಿ ಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುವುದಾಗಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ದಾವಣಗೆರೆ: ಮನೆ ಬಿಟ್ಟೋಗಿದ್ದ ಮಗ 20 ವರ್ಷದ ಬಳಿಕ ಕುಟುಂಬ ಸೇರಿದ; ಫಲಿಸಿತು ಅಪ್ಪ-ಅಮ್ಮನ ಹರಕೆ - MISSING SON COMES AFTER 20 YEARS
''ಇತ್ತೀಚೆಗೆ ತದಡಿ ಬಳಿಯ ಮೂಡಂಗಿಯಲ್ಲಿ ಒಂದು ಬೋಟ್ ಅವಘಢ ಸಂಭವಿಸಿತ್ತು. ಪರಿಶೀಲನೆ ಸಂದರ್ಭ ಆ ಬೋಟ್ ಅನ್ನು ಅನಧಿಕೃತವಾಗಿ ನಡೆಸಿರುವುದು ಕಂಡುಬಂತು. ಮಾಲೀಕರು ಸಂಬಂಧಪಟ್ಟ ಇಲಾಖೆಗಳಿಂದ ಯಾವುದೇ ರೀತಿಯ ಅನುಮತಿ ಪಡೆದಿರಲಿಲ್ಲ. ಪ್ರವಾಸಿಗರು ಲೈಫ್ ಜಾಕೆಟ್ ಧರಿಸಿದ ಹಿನ್ನೆಲೆ, ರಕ್ಷಣೆ ಮಾಡಲು ಸಾಧ್ಯವಾಯಿತು. ಅಲ್ಲಿ ಎಷ್ಟು ಬೋಟ್ಗಳು ಕಾರ್ಯಾಚರಿಸುತ್ತಿವೆ, ಎಷ್ಟು ಅನುಮತಿ ಪಡೆದಿವೆ ಎಂಬುದನ್ನೆಲ್ಲಾ ಪರಿಶೀಲಿಸಿಯೇ ಆ ಸ್ಥಳಕ್ಕೆ ಭೇಟಿ ಕೊಟ್ಟೆವು. ಅನುಮತಿ ಪಡೆದ 16 ಬೋಟ್ ಬಿಟ್ಟು, ಅನಧಿಕೃತವಾಗಿ ಹಲವು ಬೋಟ್ ಕಾರ್ಯಾಚರಿಸುತ್ತಿರುವುದು ಕಂಡುಬಂದಿದೆ. ಈ 16 ಬೋಟ್ಗಳಲ್ಲೂ ಪೊಲೀಸ್ ವೆರಿಫೆಕೇಶನ್, ಇನ್ಸುರೆನ್ಸ್ ಇಲ್ಲದಿರುವುದು ಪತ್ತೆಯಾಗಿದೆ. ಬೋಟಿಂಗ್ಗೆ ನಾವೇನು ಷರತ್ತು ಹಾಕಿಕೊಡುತ್ತೇವೋ, ಅದರಲ್ಲಿನ ದಾಖಲೆಗಳು ಸುಳ್ಳು ಎಂದು ಕಂಡುಬಂದಲ್ಲಿ ಅನುಮತಿ ತಂತಾನೇ ರದ್ದಾಗುತ್ತವೆ. ಹಾಗಾಗಿ ಈ 16 ಬೋಟ್ಗಳ ಅನುಮತಿ ಕೂಡ ರದ್ದಾಗಿದೆ. ಜಿಲ್ಲೆಯಲ್ಲಿ ಇದೇ ರೀತಿ ಅನಧಿಕೃತ ಬೋಟಿಂಗ್ ಪತ್ತೆಯಾಗಿದೆ. ಅಂತವರು ಕೂಡಲೇ ಸ್ಥಗಿತಗೊಳಿಸಬೇಕು. ಅನುಮತಿ ಪಡೆದು ಕಾರ್ಯಾಚರಿಸಿ. ಇಲ್ಲವಾದರೆ ಕ್ರಮ ಕೈಗೊಳ್ಳಲಾಗುತ್ತದೆ'' - ಜಯಂತ್, ಪ್ರವಾಸೋಧ್ಯಮ ಇಲಾಖೆ ಉಪನಿರ್ದೇಶಕ.