ಡಿ.ಕೆ.ಶಿವಕುಮಾರ್ (ETV Bharat) ಬೆಂಗಳೂರು:ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ತಲೆ ಕೆಟ್ಟವರು. ಆಸ್ವತ್ರೆಗೆ ಅವರನ್ನು ಸೇರಿಸಬೇಕು. ಆರೋಪಗಳ ಬಗ್ಗೆ ದಾಖಲೆ ಇದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಪೆನ್ ಡ್ರೈವ್ ಪ್ರಕರಣದಲ್ಲಿ ನನಗೆ ಡಿ.ಕೆ.ಶಿವಕುಮಾರ್ 100 ಕೋಟಿ ರೂ. ಆಫರ್ ನೀಡಿದ್ದರು ಎಂಬ ದೇವರಾಜೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೇವರಾಜೇಗೌಡನ ಬಳಿ ಆರೋಪಗಳ ಬಗ್ಗೆ ದಾಖಲೆ ಇದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ. ಆತ ಮಾನಸಿಕ ಸಮಸ್ಯೆ ಎದುರಿಸುತ್ತಿರಬೇಕು. ಅವನಂತಹ ಮೆಂಟಲ್ ಗಿರಾಕಿ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅವನು ಏನಾದರೂ ಮಾತನಾಡಲಿ, ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಯಾವ ಹುತ್ತದಲ್ಲಿ ಯಾವ ಹಾವಿದೆ, ಯಾರಿಗೆ ಗೊತ್ತು?. ನಮ್ಮ ಹೆಸರು ಉಪಯೋಗಿಸಿಕೊಂಡರೆ ಕೆಲವರಿಗೆ ಮಾರ್ಕೆಟ್ ಆಗುತ್ತದೆ. ಅದಕ್ಕೆ ಉಪಯೋಗಿಸಿಕೊಳ್ಳುತ್ತಾರೆ. ಒಳ್ಳೆಯ ವಿಚಾರ ಇದ್ರೆ ಮಾತನಾಡಿ. ದೇವರಾಜೇಗೌಡ ಮೆಂಟಲ್ ಕೇಸು. ಅವನು ಏನು ಬೇಕಾದರೂ ಮಾತಾಡಿಕೊಳ್ಳಲಿ. ನಿಮ್ಮ ಬಗ್ಗೆ ಅನುಕಂಪ ಬರುತ್ತಿದೆ. ಯಾರೋ ಹೇಳಿದ್ದನ್ನು ಹಾಕಿಕೊಂಡು ಕೂರಲಾಗುತ್ತಾ?. ನಿಮ್ಮ ಇಮೇಜ್ ಬಗ್ಗೆ ಯೋಚನೆ ಮಾಡಿ. ನಾನು ಆತನ ಜೊತೆ ಯಾವುದನ್ನೂ ಮಾತನಾಡಿಲ್ಲ ಎಂದರು.
ನಾನು ಆ ವ್ಯಕ್ತಿ ಜತೆ ವಿಶೇಷವಾಗಿ ಮಾತನಾಡಿಲ್ಲ. ನಾನು ಡಿಸಿಎಂ ಆಗಿದ್ದು, ನೂರಾರು ಜನ ಬಂದು ನಮ್ಮನ್ನು ಸಂಪರ್ಕಿಸುತ್ತಾರೆ. ಒಳ್ಳೆಯವರು, ಕೆಟ್ಟವರು ಎಲ್ಲರೂ ಬರುತ್ತಾರೆ. ನನ್ನ ಬಳಿ ಬಂದು ಮಾತನಾಡುತ್ತೇನೆ ಎನ್ನುವವರನ್ನು ಬೇಡ ಎಂದು ಹೇಳಲು ಆಗುವುದಿಲ್ಲ. ನನ್ನ ಬಳಿ ಬರುವವರನ್ನು ಸತ್ಯವಂತರು, ಸುಳ್ಳು ಹೇಳುವವರು ಎಂದು ಪರಿಶೀಲಿಸಿಕೊಂಡು ಕೂರಲು ಸಾಧ್ಯವೇ. ನಾನು ಯಾವುದೇ ತಪ್ಪು ಮಾಡಿಲ್ಲ, ಮಾತನಾಡಿಲ್ಲ ಎಂದು ಡಿಕೆಶಿ ತಿಳಿಸಿದರು.
ಸಂಸದ ಪ್ರಜ್ವಲ್ ರೇವಣ್ಣ ಬಂಧನವಾದ ಬಗ್ಗೆ ಮತ್ತು ಸಂತ್ರಸ್ತೆಯರ ವಿಷಯದ ಕುರಿತಂತೆ, ಇಷ್ಟು ದಿನವೂ ಪೆನ್ ಡ್ರೈವ್ ಬಗ್ಗೆ ಚರ್ಚೆಯಾಗುತ್ತಿದೆಯೇ ಹೊರತು ಸಂತ್ರಸ್ತೆಯರ ಬಗ್ಗೆ, ಅವರಿಗಾಗಿರುವ ಅನ್ಯಾಯದ ಬಗ್ಗೆ ಯಾರೂ ಚರ್ಚೆ ಮಾಡುತ್ತಿಲ್ಲ. ಎಸ್ಐಟಿ ಸಮರ್ಥವಾಗಿ ತನಿಖೆ ನಡೆಸಿ ಸಂತ್ರಸ್ತೆಯರಿಗೆ ನ್ಯಾಯ ಒದಗಿಸಲಿದೆ ಎಂಬ ವಿಶ್ವಾಸ ನನಗಿದೆ. ಸಂತ್ರಸ್ತೆಯರಿಗೆ ನ್ಯಾಯ ಒದಗಿಸಿಕೊಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಇದನ್ನೂ ಓದಿ:ಪೆನ್ಡ್ರೈವ್ ತಯಾರಿಸಿರುವುದೇ ಡಿ.ಕೆ.ಶಿವಕುಮಾರ್: ನನಗೆ 100 ಕೋಟಿ ಆಫರ್ ಕೊಟ್ಟಿದ್ದರು; ವಕೀಲ ದೇವರಾಜೇಗೌಡ ಆರೋಪ
ದೇವೇಗೌಡರಿಗೆ ನೆಮ್ಮದಿ, ಸಂತೋಷ ಕೊಡಲಿ:ಪೆನ್ ಡ್ರೈವ್ ಪ್ರಕರಣದಲ್ಲಿ ಹಲವರು ಭಾಗಿಯಾಗಿದ್ದು, ಎಲ್ಲರ ವಿರುದ್ಧ ಕ್ರಮ ಜರುಗಿಸಬೇಕು ಎಂಬ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿ ಡಿಕೆಶಿ, ದೇವೇಗೌಡರು ಜನ್ಮದಿನದ ಪ್ರಯುಕ್ತ ದೇವಾಲಯಕ್ಕೆ ಹೋಗಿದ್ದಾರೆ. ಅವರಿಗೆ ಉತ್ತಮ ಆರೋಗ್ಯ, ನೆಮ್ಮದಿ, ಸಂತೋಷ ಸಿಗಲಿ. ಅವರ ದುಃಖ ದೂರವಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಸರ್ಕಾರದ ಪರವಾಗಿ ಹಾಗೂ ವೈಯಕ್ತಿಕವಾಗಿ ತುಂಬು ಹೃದಯದಿಂದ ಅವರಿಗೆ ಜನ್ಮದಿನದ ಶುಭಾಶಯ ಕೋರುತ್ತೇನೆ ಎಂದರು.
ಪ್ರಧಾನಿಗೆ ಮಾಹಿತಿ ಕೊರತೆ:ಮೊದಲ ಬಾರಿಗೆ ಪ್ರಧಾನಮಂತ್ರಿಗಳು ಶಕ್ತಿ ಯೋಜನೆ ಬಗ್ಗೆ ಪ್ರಸ್ತಾವ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ಮೊದಲ ಗ್ಯಾರಂಟಿ ಶಕ್ತಿ ಪ್ರಾರಂಭ ಮಾಡಿದ್ದೆವು. ಒಂದು ಸಾವಿರಕ್ಕೂ ಹೆಚ್ಚು ಬಸ್ ಖರೀದಿ ಮಾಡಿದ್ವಿ. ನಿಮ್ಮ ಕೈಲಿ ಮಾಡೋಕೆ ಆಗಲಿಲ್ಲ. ತಮಿಳುನಾಡಿನವರು ಉಚಿತ ಬಸ್ ಸೇವೆ ಕೊಡುತ್ತಿದ್ದಾರೆ. ಇದನ್ನೂ ತೆಲಂಗಾಣದಲ್ಲೂ ಜಾರಿ ಮಾಡಿದ್ದೇವೆ. ಶೇ.30ರಷ್ಟು ರೈಡರ್ ಶಿಪ್ ಮೆಟ್ರೋದಲ್ಲಿ ಜಾಸ್ತಿ ಆಗಿದೆ ಮತ್ತು ಆದಾಯ ಕೂಡ ಬಂದಿದೆ. ಮಾಹಿತಿ ಇಲ್ಲದೇ ಪ್ರಧಾನಿ ಮಾತಾಡಿರಬಹುದು ಅನ್ಸುತ್ತೆ ಎಂದು ಡಿಸಿಎಂ ತಿರುಗೇಟು ನೀಡಿದ್ದಾರೆ.
ಶಕ್ತಿ ಯೋಜನೆಯಿಂದ ಸಾಮಾನ್ಯ ಜನಕ್ಕೂ ಅನುಕೂಲ ಆಗುತ್ತೆ. ಹೆಣ್ಣು ಮಕ್ಕಳು ತೃಪ್ತಿಕರವಾಗಿ ಪ್ರಯಾಣ ಮಾಡುತ್ತಿದ್ದಾರೆ. ಉತ್ತರ ಭಾರತದಲ್ಲಿ ಚುನಾವಣೆ ಚೆನ್ನಾಗಿಯಾಗಿದೆ. ಜನ ಬದಲಾವಣೆ ಬಯಸಿದ್ದಾರೆ. ರಾಜ್ಯದಲ್ಲಿ ಇಪ್ಪತ್ತು ಕಾಂಗ್ರೆಸ್ಗೆ ಬರಲಿವೆ. ಬಿಜೆಪಿಯವರು ಗಾಬರಿ ಆಗಿದ್ದಾರೆ. ಪ್ರಧಾನಿಯವರು ವಿಚಲಿತರಾಗಿದ್ದಾರೆ ಅನ್ನೋದಕ್ಕಿಂತ ಮಾಹಿತಿ ಕೊರತೆ ಇದೆ ಎಂದರು.
ಹುಬ್ಬಳ್ಳಿಯಲ್ಲಿ ಅಂಜಲಿ ಹತ್ಯೆ ಪ್ರಕರಣ ವಿಚಾರವಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಬಿಜೆಪಿ ಟೀಕೆ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ಇರುವುದೇ ಆರೋಪ ಮಾಡಲು, ಸರ್ಕಾರಕ್ಕೆ ಕೆಟ್ಟ ಹೆಸರು ತರಲು. ಅವರ ಹುಳುಕು ಮುಚ್ಚಿಹಾಕಿ ಕಾಂಗ್ರೆಸ್ ಬಗ್ಗೆ ಟೀಕೆ ಮಾಡುವುದು ಅವರ ಕೆಲಸವಾಗಿದೆ. ನಾವು ಸಮರ್ಥವಾಗಿ ಸರ್ಕಾರ ನಡೆಸುತ್ತಿರುವುದನ್ನು ಅವರಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ:ಪ್ರಜ್ವಲ್ ವಿರುದ್ಧ ಕ್ರಮದ ಬಗ್ಗೆ ಯಾವ ತಕರಾರೂ ಇಲ್ಲ: ಪೆನ್ ಡ್ರೈವ್ ಕೇಸ್ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ