ಚಾಮರಾಜನಗರ: ಕಾಂಗ್ರೆಸ್ ಪಕ್ಷ ಜೀವಂತವಾಗಿದ್ದಲ್ಲಿ ಮೊದಲು ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ಉಚ್ಛಾಟಿಸಲಿ ಎಂದು ಎಂಎಲ್ಸಿ ಎಚ್.ವಿಶ್ವನಾಥ್ ಆಗ್ರಹಿಸಿದರು. ಶಿವಮೊಗ್ಗದಲ್ಲಿ ನಡೆದಿದ್ದ ಸಮಾರಂಭದಲ್ಲಿ ಸಂಸದ ಬಿ ವೈ ರಾಘವೇಂದ್ರ ಪರ ಬ್ಯಾಟ್ ಬೀಸಿದ್ದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಗುಂಡ್ಲುಪೇಟೆಯಲ್ಲಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ನಿಂದ ಮೊದಲು ಶಿವಶಂಕರಪ್ಪ ಅವರನ್ನು ಉಚ್ಛಾಟಿಸಬೇಕು. ಶಿವಶಂಕರಪ್ಪ ರಾಜಕೀಯ ಮುತ್ಸದಿಯಲ್ಲ, ಜಾತಿವಾದಿ, ಪಕ್ಷದ ಹಾಳಾದರೂ ನೆಂಟಸ್ತಿಕೆ ಉಳಿಸಿಕೊಳ್ಳುವ ರೀತಿ ಮಾತನಾಡಿದ್ದಾರೆ, ಕಾಂಗ್ರೆಸ್ನಿಂದ ಗೆದ್ದು ಅವರ ಮಗನನ್ನು ಸಚಿವರನ್ನಾಗಿ ಮಾಡಿ ಬೇರೆ ಪಕ್ಷದ ಪರ ಕ್ಯಾನ್ವಾಸ್ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.
ಶಾಸಕರಿಗೆ ನಿಗಮ ಮಂಡಳಿ ಬೇಡ:ಶಾಸಕರಿಗೆ ನಿಗಮ ಮಂಡಳಿ ಸ್ಥಾನಗಳನ್ನು ಕೊಡಬಾರದು, ಎಂಎಲ್ಎ ಸ್ಥಾನವೂ ಅವರಿಗೆ, ನಿಗಮ ಅಧ್ಯಕ್ಷ ಗಿರಿಯೂ ಅವರಿಗೆ ಎಂದರೆ ಹೇಗೆ..? ಬಾವುಟ ಕಟ್ಟುವ ಕಾರ್ಯಕರ್ತರು ಏನು ಮಾಡಬೇಕು, ಶಾಸಕ ಸೂಚಿಸಿದ ಕಾರ್ಯಕರ್ತರಿಗೆ ಬೇಕಾದರೇ ನಿಗಮ ಮಂಡಲಿ ಕೊಡಲಿ, ಶಾಸಕರಿಗೆ ನಿಗಮ ಮಂಡಲಿ ಅಧ್ಯಕ್ಷ ಸ್ಥಾನ ಕೊಡಬಾರದು ಎಂದು ಅಭಿಪ್ರಾಯಪಟ್ಟರು.
ಮೋದಿ ಕುರಿತು ಜೋಕ್: ಈಗ ಯಾರೋ ನನ್ನ ಮೊಬೈಲ್ ಗೆ ಒಂದು ಸಂದೇಶ ಕಳುಹಿಸಿದ್ದಾರೆ. ಹೆಂಡತಿ ಬಿಟ್ಟ ರಾಮನನ್ನು- ಹೆಂಡತಿ ತೊರೆದ ಪ್ರಧಾನಿ ಪೂಜಿಸುವುದು" ಎಂಬಂತಾಗಿದೆ. ಇದನ್ನು ಹೇಳಿದರೆ ನಾನು ರಾಮನ ವಿರೋಧಿ ಅಂತಾರೆ. ಆ ರೀತಿಯಲ್ಲ, ಜನನಾಯಕರ ನಡೆ-ನುಡಿ ವೈರುಧ್ಯಗಳಿಂದ ಕೂಡಿರುವುದರಿಂದ ಜನರು ಯಾವ ಜನನಾಯಕನಿಗೂ ಗೌರವ ಕೊಡುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.