ಕರ್ನಾಟಕ

karnataka

ETV Bharat / state

ಶೇ 100ರಷ್ಟು ಅನುದಾನ ಖರ್ಚು ಮಾಡದಿದ್ದರೆ ಅಧಿಕಾರಿಗಳ ಮೇಲೆ ಕ್ರಮ, ನಿರ್ಲಕ್ಷ್ಯಕ್ಕಿಲ್ಲ ಕ್ಷಮೆ: ಸಿಎಂ - CM Siddaramaiah

ಎಸ್​ಸಿ-ಎಸ್​ಪಿ, ಟಿಎಸ್​ಪಿ ಅಡಿಯಲ್ಲಿ ಆಯಾಯ ವರ್ಷವೇ ಶೇ 100ರಷ್ಟು ಅನುದಾನವನ್ನು ಖರ್ಚು ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದರು.

By ETV Bharat Karnataka Team

Published : Jul 5, 2024, 2:28 PM IST

Bengaluru  CM Siddaramaiah
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರಾಜ್ಯ ಅಭಿವೃದ್ಧಿ ಪರಿಷತ್‌ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. (ETV Bharat)

ಬೆಂಗಳೂರು:''ದೇಶದಲ್ಲಿ ಎಸ್‌ಸಿ-ಎಸ್‌ಪಿ/ಟಿಎಸ್‌ಪಿ ಕಾಯ್ದೆ ಮಾಡಿರುವುದು ನಾವು ಮಾತ್ರ. ಜನಸಂಖ್ಯೆಗೆ ಅನುಗುಣವಾಗಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ಹಣ ಕೊಡುತ್ತಿರುವುದು ನಮ್ಮ ಸರ್ಕಾರ ಮಾತ್ರ. 2024-25ನೇ ಸಾಲಿನಲ್ಲಿ 39121.46 ಕೋಟಿ ರೂ. ಇದ್ದರೆ, ಹಿಂದಿನ ವರ್ಷ 35221.84 ಕೋಟಿ ರೂ. ಇತ್ತು. ಇದರಲ್ಲಿ ಬಿಡುಗಡೆ ವೆಚ್ಚದ ಶೇ 99.64 ಕೋಟಿ ರೂ.ಯಷ್ಟು ಖರ್ಚಾಗಿದೆ. ಉಳಿದದ್ದು ಏಕೆ ಖರ್ಚು ಮಾಡಿಲ್ಲ'' ಎಂದು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು (ಶುಕ್ರವಾರ) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರಾಜ್ಯ ಅಭಿವೃದ್ಧಿ ಪರಿಷತ್‌ ಸಭೆಯಲ್ಲಿ ಅವರು ಮಾತನಾಡಿದರು.

''ಆಯಾಯ ವರ್ಷವೇ ಶೇ 100ರಷ್ಟು ಖರ್ಚು ಮಾಡಬೇಕು ಎನ್ನುವ ಕಾನೂನು ಮಾಡಿದ್ದು ನಾವೇ. ಖರ್ಚು ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎನ್ನುವ ನಿಯಮವನ್ನೂ ಮಾಡಿದ್ದೇವೆ. ನಿರ್ಲಕ್ಷ್ಯ ಮಾಡಿದಾರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ನಿರ್ಲಕ್ಷ್ಯಕ್ಕೆ ಕ್ಷಮೆ ಇಲ್ಲ'' ಎಂದು ಎಚ್ಚರಿಕೆ ನೀಡಿದ್ದಾರೆ.

''ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಎಸ್‌ಸಿ-ಎಸ್‌ಪಿ, ಟಿಎಸ್‌ಪಿ ಕಾಯ್ದೆ 2013 ಅನ್ನು ಜಾರಿಗೆ ತಂದು, ಸರ್ಕಾರದ ಒಟ್ಟಾರೆ ಅಭಿವೃದ್ಧಿ ಆಯವ್ಯಯದ ಶೇ 24.1ರಷ್ಟನ್ನು ಈ ಸಮುದಾಯಗಳ ಅಭಿವೃದ್ಧಿಗೆ ವೆಚ್ಚ ಮಾಡಲಾಗುತ್ತಿದೆ. ಇಂದು ನಡೆದ ರಾಜ್ಯ ಪರಿಷತ್‌ ಸಭೆಯಲ್ಲಿ 2024-25ನೇ ಸಾಲಿಗೆ ಎಸ್‌ಸಿ-ಎಸ್‌ಪಿ/ಟಿಎಸ್‌ಪಿ ಅಡಿ ಒಟ್ಟಾರೆ 39,121.46 ಕೋಟಿ ರೂ. ಅನುದಾನ ಒದಗಿಸಲಾಗಿದೆ'' ಎಂದು ಹೇಳಿದ್ದಾರೆ.

''ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಇದು 11% ಅಂದರೆ 3897 ಕೋಟಿ ರೂ. ಹೆಚ್ಚಳವಾಗಿದೆ. ಎಸ್‌ಸಿಎಸ್‌ಪಿ ಅಡಿ 27,673.96 ಕೋಟಿ ರೂ. ಹಾಗೂ ಟಿಎಸ್‌ಪಿ ಅಡಿ 11447.50 ಕೋಟಿ ರೂ. ಒದಗಿಸಲಾಗಿದೆ. ಈ ವರ್ಷದ ಕ್ರಿಯಾ ಯೋಜನೆಯಲ್ಲಿ ಮುಖ್ಯವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 8,480 ಕೋಟಿ ರೂ., ಇಂಧನ ಇಲಾಖೆಗೆ 5,026 ಕೋಟಿ ರೂ., ಸಮಾಜ ಕಲ್ಯಾಣ ಇಲಾಖೆಗೆ 4,174 ಕೋಟಿ ರೂ., ಕಂದಾಯ ಇಲಾಖೆಗೆ 3,403 ಕೋಟಿ ರೂ. , ಗ್ರಾಮೀಣಾಭಿವೃದ್ಧಿ ಇಲಾಖೆಗೆ 3,163 ಕೋಟಿ ರೂ. ಒದಗಿಸಲಾಗಿದೆ. ಕಳೆದ ವರ್ಷ 35221.84 ಕೋಟಿ ರೂ. ಆಯವ್ಯಯ ಹಂಚಿಕೆಗೆ ಎದುರಾಗಿ ಶೇ.97.23ರಷ್ಟು ಹಾಗೂ ಬಿಡುಗಡೆಗೆ ಎದುರಾಗಿ ಶೇ. 99.64 ರಷ್ಟು ಸಾಧನೆಯಾಗಿದೆ. ಈ ಅನುದಾನ ಯಾವ ಕಾರಣಕ್ಕೂ ಬಳಕೆಯಾಗದೆ ಉಳಿಕೆ (lapse) ಆಗಬಾರದು. ಅದೇ ವರ್ಷ ವೆಚ್ಚವಾಗಬೇಕು'' ಎಂದು ಸಿಎಂ ತಾಕೀತು ಮಾಡಿದ್ದಾರೆ.

''ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನಿಗಮಗಳಲ್ಲಿ ಹಣ ವೆಚ್ಚವಾಗಿಲ್ಲ. ಇದಕ್ಕೆ ಶಾಸಕರು ಪಟ್ಟಿ ಕೊಡಲಿಲ್ಲ ಎಂಬ ಕಾರಣ ನೀಡುತ್ತಾರೆ. ನಿಗಮಗಳ ಅಧ್ಯಕ್ಷರು ಹಾಗೂ ಸಂಬಂಧಿಸಿದ ಸಚಿವರು, ಶಾಸಕರು ಫಲಾನುಭವಿಗಳ ಪಟ್ಟಿ ಒದಗಿಸುವಂತೆ ಮನವೊಲಿಸಬೇಕು. ಈ ಯೋಜನೆಗಳ ಮೌಲ್ಯಮಾಪನದಿಂದ ಶೇ.65ರಷ್ಟು ಉಪಯೋಗವಾಗಿರುವುದು ಕಂಡು ಬರುತ್ತದೆ. ಸೆಕ್ಷನ್‌ 7 (ಡಿ) ಕೈಬಿಡಲಾಗಿದೆ. ಇದರಿಂದಾಗಿ ಈ ಯೋಜನೆಯ ಸಂಪೂರ್ಣ ವೆಚ್ಚ ಈ ಸಮುದಾಯದವರಿಗೇ ಬಳಕೆಯಾಗಲಿದೆ'' ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಸಚಿವರಾದ ಹೆಚ್.ಕೆ.ಪಾಟೀಲ್, ಪ್ರಿಯಾಂಕ್‌ ಖರ್ಗೆ, ಡಾ.ಎಂ.ಸಿ.ಸುಧಾಕರ್‌, ಶಾಸಕರಾದ ಪ್ರಸಾದ್ ಅಬ್ಬಯ್ಯ, ಬಸಂತಪ್ಪ, ಶ್ರೀನಿವಾಸ್, ನರೇಂದ್ರಸ್ವಾಮಿ, ಕೃಷ್ಣಾನಾಯಕ್ , ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ರಾಥೋಡ್, ಸಂಸದರಾದ ಸುನಿಲ್ ಬೋಸ್ ಪ್ರಕಾಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್‌ ಗೋಯೆಲ್‌, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಡಾ.ಶಾಲಿನಿ ರಜನೀಶ್‌ ಗೋಯೆಲ್‌, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್‌ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:ಸಿಎಂ ಕುರ್ಚಿ ಮೇಲೆ ಟವೆಲ್ ಹಾಕಿದವರಿಂದಲೇ ಮುಡಾ ಹಗರಣ ಬಯಲು: ಹೆಚ್‌ಡಿಕೆ - H D Kumaraswamy

ABOUT THE AUTHOR

...view details