ಬೆಂಗಳೂರು: ಗೌರವ ಇಲ್ಲದ ಕಡೆ ನಾವು ಯಾಕೆ ಇರಬೇಕು. ರಾಜೀನಾಮೆ ಕೊಡುವುದಕ್ಕೂ ಹಿಂದೆಮುಂದೆ ನೋಡುವುದಿಲ್ಲ ಎಂದು ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ವಿನಯ್ ಕುಲಕರ್ಣಿ ಎಚ್ಚರಿಕೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಮಂಡಳಿಯಲ್ಲಿನ ಟೆಂಡರ್ ಕಾಮಗಾರಿ, ಅನುದಾನ ಸಂಬಂಧ ಸಚಿವ ಬೈರತಿ ಸುರೇಶ್ ಜೊತೆಗೆ ಉಂಟಾಗಿರುವ ಜಟಾಪಟಿ ಬಗ್ಗೆ ಪ್ರತಿಕ್ರಿಯೆ ನೀಡಿದರು. ಅಸಮಾಧಾನ ವ್ಯಕ್ತಪಡಿಸಿಲ್ಲ, ಪ್ರಸಂಗ ಬಂದರೆ ವ್ಯಕ್ತಪಡಿಸುತ್ತೇನೆ. ನಾನು ದುರಾಡಳಿತವನ್ನು ಸಹಿಸೋದಿಲ್ಲ. ನಮ್ಮ ಬೋರ್ಡ್ನಲ್ಲಿ ದುರಾಡಳಿತ ನಡೆಯುತ್ತಿದೆ. ಆ ಬೋರ್ಡ್ಗೆ ನಾನು ಹೆಡ್. ಆದರೆ ಅಲ್ಲಿ ವ್ಯವಸ್ಥೆ ಸರಿಯಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಳೆದ ಬಾರಿ ಸಿಐಡಿಗೆ ಕೊಡಬೇಕೆಂದು ಸಚಿವರು ಹೇಳಿದ್ದಾರೆ. ಅಲ್ಲಿ ಪರಿಶೀಲನೆ ಮಾಡುವ ಹಕ್ಕು ಇಲ್ಲದಂತಹ ದುರಾಡಳಿತ ನಡೆದಿದೆ. ವಾಲ್ಮೀಕಿ ಬೋರ್ಡ್ ವ್ಯವಸ್ಥೆ ನೋಡಿದ್ದೇವೆ. ಅದಕ್ಕಿಂತ ಕೆಟ್ಟ ವ್ಯವಸ್ಥೆ ಆಗುವುದು ಬೇಡ. ಎಲ್ಲದಕ್ಕೂ ಪತ್ರವನ್ನು ನಾನು ಕೊಟ್ಟಿದ್ದೇನೆ. ಪ್ರತಿಯೊಂದಕ್ಕೂ ಪತ್ರ ಕೊಟ್ಟಿದ್ದೇನೆ. ನಾನು ದೆಹಲಿಗೆ ಹೋಗಿದ್ದು ನಿಜ. ಪಕ್ಷದ ಮುಖಂಡರಿಗೆ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ಎಲ್ಲಾ ಕಂಪನಿಗಳ ಬಗ್ಗೆ ತನಿಖೆ ಆಗಬೇಕು. ಪ್ರಸಂಗ ಬಂದರೆ ದಾಖಲೆ ಕೊಡುತ್ತೇನೆ. ನಾನು ಭಯಪಡುವುದಿಲ್ಲ. ಪ್ರಸಂಗ ಬಂದರೆ ಕೊಟ್ಟೆ ಕೊಡುತ್ತೇನೆ. ಬಹಿರಂಗವಾಗಿಯೇ ಹೇಳುತ್ತೇನೆ ಎಂದು ತಿಳಿಸಿದರು.