ಮಂಡ್ಯ: "2028ರ ವರೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನಡೆಯಲ್ಲ, ಮತ್ತೆ ನಾನೇ ಈ ರಾಜ್ಯದ ಮುಖ್ಯಮಂತ್ರಿಯಾಗಲಿದ್ದೇನೆ" ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಜನರು ಒಂದು ಅವಕಾಶ ನೀಡುತ್ತಾರೆ ಎಂಬ ವಿಶ್ವಾಸ ಇದೆ. 2028ರ ಒಳಗೆ ಆ ಅವಕಾಶ ಬರುತ್ತೆ. ನಾನು ಜ್ಯೋತಿಷಿ ಅಲ್ಲ, ಆದರೂ ಹೇಳುತ್ತಿದ್ದೀನಿ. ಜನರು ಬಯಸಿದ್ರೆ ಮತ್ತೆ ಯಾಕೆ ನಾನು ಸಿಎಂ ಆಗಬಾರದಾ? ಜನ ಮತ್ತೆ ತೀರ್ಮಾನ ಮಾಡುತ್ತಾರೆ. ನನಗೆ ಐದು ವರ್ಷ ಸರ್ಕಾರ ನಡೆಸಲು ಅವಕಾಶ ಕೊಡಿ ಅಂತ ಜನತೆಗೆ ಈಗಲೂ ಮನವಿ ಮಾಡುತ್ತೇನೆ" ಎಂದು ಹೇಳುವ ಮೂಲಕ 3ನೇ ಬಾರಿ ಮುಖ್ಯಮಂತ್ರಿಯಾಗುವ ಆಸೆ ಬಿಚ್ಚಿಟ್ಟಿದ್ದಾರೆ.
"ನನ್ನ 14 ತಿಂಗಳ ಆಡಳಿತ, ಬೇರೆಯವರ ಹಂಗಿನಲ್ಲಿ ಮಾಡಿದ್ದು. ಇನ್ನೊಬ್ಬರ ಹಂಗಿನಲ್ಲಿ ಸರ್ಕಾರ ಮಾಡಿದಾಗಲು ನಾಡಿಗೆ ಕೊಟ್ಟ ಕಾರ್ಯಕ್ರಮ ಜನರ ಮನಸ್ಸಿನಲ್ಲಿ ಉಳಿದಿದೆ. 5 ವರ್ಷಗಳ ಸರ್ಕಾರ ನನಗೆ ಒಂದು ಬಾರಿ ಸಿಕ್ಕಿದ್ರೆ, ನನಗಿರುವ ಅನುಭವದಲ್ಲಿ ಉತ್ತಮ ಕೆಲಸ ಮಾಡುತ್ತೇನೆ" ಎಂದು ಭರವಸೆ ನೀಡಿದರು.
"ರಾಜ್ಯದಲ್ಲಿ ಹಣದ ಕೊರತೆ ಇಲ್ಲ. ಕರ್ನಾಟಕ ಸಮೃದ್ಧಿಯ ನಾಡು. ಆದ್ರೆ ಇವತ್ತು ಹಣ ಲೂಟಿಯಾಗುತ್ತಿದೆ. ಸರ್ಕಾರದ ಆಸ್ತಿ ಕಬಳಿಕೆ ಆಗ್ತಿದೆ. ಇದಕ್ಕೆ ಕಡಿವಾಣ ಹಾಕಿದ್ರೆ. ಇವರು ಕೊಡುವ 2,000 ರೂ. ಅಲ್ಲ ಕನಿಷ್ಠ 10 ಸಾವಿರ ರೂ. ಕೊಡುವ ಕಾರ್ಯಕ್ರಮಗಳು ಇವೆ. ಜನರು ಒಂದು ಅವಕಾಶ ನೀಡ್ತಾರೆ ಅನ್ನೋ ವಿಶ್ವಾಸ ಇದೆ. 2028ರ ಒಳಗೆ ಆ ಅವಕಾಶ ನನಗೆ ಬರುತ್ತೆ" ಎಂದು ತಿಳಿಸಿದರು.
"ಇಂದಿನ ಸರ್ಕಾರದ ನಡವಳಿಕೆಗಳಿಂದ ಜನರು ಬೇಸತ್ತಿದ್ದಾರೆ. ಜನರಲ್ಲಿ ಸರ್ಕಾರದ ಬಗ್ಗೆ ಕಿಂಚಿತ್ತೂ ಗೌರವ ಇಲ್ಲ. ಜನರೇ ಈ ಸರ್ಕಾರವನ್ನು ತೆಗೆಯುತ್ತಾರೆ. ನಾವು ತೆಗೆಯಲು ಸಾಧ್ಯವಿಲ್ಲ, ಜನರೇ ತೀರ್ಮಾನ ಮಾಡಬೇಕು. ಈ ಪರಿಸ್ಥಿತಿಯಲ್ಲಿ ಜನರೇ ತೀರ್ಮಾನ ಮಾಡ್ತಾರೆ. ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನದ ಸ್ಫೋಟ ಆಗಿದೆ. ಅವಗ ಸ್ಫೋಟ ಆಗುತ್ತೆ ಕಾದು ನೋಡೋಣ. ನಾವು ಅವರ ಸರ್ಕಾರ ಅಲ್ಲಾಡಿಸುತ್ತಿವಿ ಅಂತ ಹೇಳಿಲ್ಲ. ಸರ್ಕಾರದ ನಿಷ್ಕ್ರಿಯತೆಯಿಂದ ಶಾಸಕರು ಹಳ್ಳಿಗೆ ಹೋಗಿ ಜನರನ್ನ ಭೇಟಿ ಮಾಡದ ವಾತಾವರಣ ಸೃಷ್ಟಿಯಾಗಿದೆ. ಸರ್ಕಾರದ ನಡವಳಿಕೆ ಬಗ್ಗೆ ಅವರಲ್ಲೇ ಅಸಮಾಧಾನ ಸ್ಫೋಟವಾಗುತ್ತೆ" ಎಂದು ಹೇಳಿದರು.