ಕರ್ನಾಟಕ

karnataka

ETV Bharat / state

ಲೋಕಸಭಾ ಚುನಾವಣೆ ಸ್ಪರ್ಧೆ ವಿಚಾರ ಹೈಕಮಾಂಡ್​ ತಿರ್ಮಾನಕ್ಕೆ ನಾನು ಬದ್ಧ: ಜಗದೀಶ್ ಶೆಟ್ಟರ್ - High Command decision

ಬಿಜೆಪಿ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಜಗದೀಶ್​ ಶೆಟ್ಟರ್​ ಅವರಿಗೆ ಧಾರವಾಡ ಅಥವಾ ಹಾವೇರಿಯಿಂದ ಟಿಕೆಟ್​ ಘೋಷಣೆಯಾಗಿಲ್ಲ.

Former CM Jagadish Shettar
ಮಾಜಿ ಸಿಎಂ ಜಗದೀಶ್​ ಶೆಟ್ಟರ್​

By ETV Bharat Karnataka Team

Published : Mar 14, 2024, 1:11 PM IST

Updated : Mar 14, 2024, 4:50 PM IST

ಹುಬ್ಬಳ್ಳಿ:"ಲೋಕಸಭಾ ಚುನಾವಣೆಗೆ ಸ್ಪರ್ಧೆ ವಿಚಾರವಾಗಿ ಹೈಕಮಾಂಡ್​ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ" ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ಮಾಜಿ ಸಿಎಂ ಜಗದೀಶ್​ ಶೆಟ್ಟರ್​

ನಗರದಲ್ಲಿಂದು ತುರ್ತು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, "ಲೋಕಸಭಾ ಚುನಾವಣೆ ವಿಚಾರವಾಗಿ ಧಾರವಾಡ, ಹಾವೇರಿ ಕ್ಷೇತ್ರಕ್ಕೆ ಟಿಕೆಟ್ ನೀಡುವಂತೆ ಹೈಕಮಾಂಡ್​ಗೆ ಬೇಡಿಕೆ ಇಟ್ಟಿದ್ದೆ. ಆದರೆ ಬೇರೆ ಬೇರೆ ಕಾರಣದಿಂದ ಅದು ಕೈತಪ್ಪಿದೆ. ಹೀಗಾಗಿ ಆ ವಿಚಾರವಾಗಿ ನಾನು ಹೆಚ್ಚು ಮಾತನಾಡುವುದಿಲ್ಲ. ಸದ್ಯ ಬೆಳಗಾವಿ ಲೋಕಸಭಾ ಕ್ಷೇತ್ರದ ಚರ್ಚೆ ನಡೆದಿದೆ" ಎಂದರು.

ಬೆಳಗಾವಿಯಲ್ಲಿ ಶೆಟ್ಟರ್ ಗೋಬ್ಯಾಕ್ ಅಭಿಯಾನದ ವಿಚಾರವಾಗಿ ಮಾತನಾಡಿ, "ಬೆಳಗಾವಿಯಲ್ಲಿ ಪರಿಸ್ಥಿತಿ ಸರಿಯಿಲ್ಲ ಅಂತ ಏನಿಲ್ಲ. ಈಗಾಗಲೇ ಬೆಳಗಾವಿ ಜಿಲ್ಲೆಯ ನಾಯಕರು, ಹೈಕಮಾಂಡ್​ ನಾಯಕರ ಜತೆಗೆ ಚರ್ಚೆ ಮಾಡುತ್ತೇನೆ. ವಿ. ಸೋಮಣ್ಣ ಅವರಿಗೂ ತುಮಕೂರಲ್ಲಿ ಮೊದಲು ವಿರೋಧ ವ್ಯಕ್ತವಾಗಿತ್ತು. ಟಿಕೆಟ್ ನೀಡಿದ ಬಳಿಕ ಎಲ್ಲಾ ಸರಿ ಹೋಗಿದೆ. ಅದರಂತೆ ಬೆಳಗಾವಿಯಲ್ಲಿಯೂ ಆಗಲಿದೆ" ಎಂದು ತಿಳಿಸಿದರು.

"ಸದ್ಯ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ತೀರ್ಮಾನ ಆಗಿಲ್ಲ, ಇದೀಗ ಚರ್ಚೆ ಹಂತದಲ್ಲಿದೆ. ಯಡಿಯೂರಪ್ಪ, ವಿಜಯೇಂದ್ರ ಕೂಡಾ ಈ ಬಗ್ಗೆ ಮಾತನಾಡಿದ್ದಾರೆ. ನಾಲ್ಕು ಗೋಡೆ ಮಧ್ಯೆ ನಡೆದ ಚರ್ಚೆಗಳನ್ನು ಬಹಿರಂಗವಾಗಿ ತಿಳಿಸಲು ಅಗುವುದಿಲ್ಲ" ಎಂದರು.

ಶೆಟ್ಟರ್ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ, "ಅದನ್ನು ನಾನು ಮಾತನಾಡುವುದಿಲ್ಲ. ನಮ್ಮ ಬೆಂಬಲಿಗರು ಹೇಳುತ್ತಾರೆ. ಅಷ್ಟೇ ಅಲ್ಲದೇ ಜನರಿಗೆ ಗೊತ್ತಿದೆ. ಅವರೇ ಪಾಠ ಕಲಿಸುತ್ತಾರೆ" ಎಂದು ಹೆಸರು ಹೇಳದೇ ಪರೋಕ್ಷವಾಗಿ ಪ್ರಹ್ಲಾದ್ ಜೋಶಿ ವಿರುದ್ಧ ಕಿಡಿಕಾರಿದರು.

ಪ್ರಹ್ಲಾದ್ ಜೋಶಿ ಅವರ ಪರವಾಗಿ ಪ್ರಚಾರ ಮಾಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, "ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ನಾನು ಪ್ರಚಾರ ಮಾಡುತ್ತೇನೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಬೇಕೆಂಬ ಆಸೆ ಎಲ್ಲರಿಗೂ ಇದೆ. ಅದರಂತೆ ಪಕ್ಷ ಗೆಲ್ಲಿಸಲು ಶ್ರಮಿಸಲಾಗುವುದು. ಈ ಬಾರಿಯೂ ಎಲ್ಲೆಡೆ ಮೋದಿ ಅಲೆಯಿಂದ ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುವ ಸಾಧ್ಯತೆ ಇದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

"ಟಿಕೆಟ್ ವಿಚಾರವಾಗಿ ದೆಹಲಿಗೆ ಹೋಗುವುದಿಲ್ಲ. ಬದಲಾಗಿ ಬೆಂಗಳೂರಿಗೆ ಹೋಗುವ ಸಾಧ್ಯತೆಯಿದೆ. ಖಂಡಿತವಾಗಿ ಈ ಬಾರಿ ಲೋಕಸಭಾ ಟಿಕೆಟ್ ಸಿಗುವ ಸಾಧ್ಯತೆ ಇದೆ" ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಮುಂದಿನ ದಿನಗಳಲ್ಲಿ ಶೆಟ್ಟರ್​ಗೆ ಪಶ್ಚಾತ್ತಾಪ ಆಗಲಿದೆ ಕಾದು ನೋಡಿ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, "ನಾನು ಕಾಂಗ್ರೆಸ್ ಹಾಗೂ ಬಿಜೆಪಿಗೆ ಹೋದಾಗ ಪಶ್ಚಾತ್ತಾಪ ಪಟ್ಟಿಲ್ಲ. ಬೇರೆಯವರಿಗೆ ಪಶ್ಚಾತ್ತಾಪ ಪಡಿಸುತ್ತೇನೆ. ಹಾಗಾಗಿ ನನಗೆ ಪಶ್ಚಾತ್ತಾಪ ಎಂಬುದಿಲ್ಲ" ಎಂದರು.

ಇದನ್ನೂ ಓದಿ:ಬಿಜೆಪಿಯ ಮೂವರು ಸಂಸದರು ಕಾಂಗ್ರೆಸ್​ ಸೇರ್ಪಡೆಯಾಗಲು ಬಯಸಿದ್ದಾರೆ: ಡಿ.ಕೆ ಶಿವಕುಮಾರ್​ ಹೊಸ ಬಾಂಬ್​

Last Updated : Mar 14, 2024, 4:50 PM IST

ABOUT THE AUTHOR

...view details