ಬೆಂಗಳೂರು: ಪತ್ನಿಯನ್ನು ಚಾಕುವಿನಿಂದ ಹತ್ಯೆಗೈದು ಪತಿ ಪರಾರಿಯಾಗಿರುವ ಘಟನೆ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಫಾತಿಮಾ (34) ಕೊಲೆಯಾದವರು. ತಬರೇಜ್ ಪಾಷಾ ಕೊಲೆ ಆರೋಪಿ.
"9 ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ವೈಮನಸ್ಸು ಮೂಡಿದ ಹಿನ್ನೆಲೆಯಲ್ಲಿ ಪತಿ ದೂರವಾಗಿ ತಾಯಿಯೊಂದಿಗೆ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸೋಮೇಶ್ವರ ನಗರದಲ್ಲಿ ವಾಸವಾಗಿದ್ದ. ವಿಚ್ಛೇದನ ಕೋರಿ ಇಬ್ಬರೂ ನ್ಯಾಯಾಲಯದ ಮೆಟ್ಟಿಲೇರಿದ್ದರು. ಹಿರಿಯರ ಸಲಹೆಯ ಮೇರೆಗೆ ವಿಚ್ಛೇದನ ಅರ್ಜಿ ವಾಪಸ್ ಪಡೆದಿದ್ದರು" ಎಂದು ಪೊಲೀಸರು ತಿಳಿಸಿದ್ದಾರೆ.
ಚಾಮರಾಜಪೇಟೆಯ ಸಮೀಪದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಫಾತಿಮಾ ಕೆಲಸ ಮಾಡುತ್ತಿದ್ದರು. ಪಾಷಾ ಪತ್ನಿಯ ಮನೆಗೆ ಆಗಾಗ್ಗೆ ಬಂದು ಜಗಳವಾಡುತ್ತಿದ್ದ. ಹಿರಿಯರು ಇಬ್ಬರ ನಡುವೆ ಸಂಧಾನ ಮಾಡಿ ಕಳುಹಿಸಿದ್ದರು. ಇಂದು ಬೆಳಗ್ಗೆ ಸುಮಾರು 8.30ರ ವೇಳೆಗೆ ಮನೆಗೆ ಬಂದ ತಬರೇಜ್ ಪತ್ನಿಯೊಂದಿಗೆ ಜಗಳವಾಡಿ ಚಾಕುವಿನಿಂದ ಆಕೆಯ ತಲೆ ಹಾಗೂ ಕೈಕಾಲುಗಳಿಗೆ ಚುಚ್ಚಿ ಸ್ಥಳದಿಂದ ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಫಾತಿಮಾ ಸಾವನ್ನಪ್ಪಿದ್ದಾರೆ. ಆರೋಪಿ ವಿರುದ್ಧ 2016ರಲ್ಲಿ ಕಾಟನ್‌ಪೇಟೆ ಠಾಣೆಯಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿತ್ತು. ವಿಶೇಷ ತಂಡ ರಚಿಸಿ ಆತನ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಯುವಕನ ಕೊಲೆ - Bengaluru Murder