ಬೆಂಗಳೂರು:ಕೌಟುಂಬಿಕ ಕಲಹದಿಂದ ಬೇಸತ್ತು ಪತ್ನಿ ಮನೆ ಮುಂದೆ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಮಂಜುನಾಥ್ (39) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಎನ್ಜಿಇಎಫ್ ಬಡಾವಣೆಯಲ್ಲಿ ವಾಸವಾಗಿದ್ದ ಪತ್ನಿ ನಯನರಾಜ್ ಮನೆ ಮುಂದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ. ಮೃತನ ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತುಮಕೂರು ಮೂಲದ ಮಂಜುನಾಥ್ ಕ್ಯಾಬ್ ಚಾಲಕನಾಗಿದ್ದು, ಪತ್ನಿ ನಯನರಾಜ್ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ. 2013ರಲ್ಲಿ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಇಬ್ಬರು ಧರ್ಮಸ್ಥಳದಲ್ಲಿ ವಿವಾಹ ಮಾಡಿಕೊಂಡಿದ್ದರು. ದಂಪತಿಗೆ 9 ವರ್ಷದ ಮಗನಿದ್ದು, 2016 ರಿಂದ ಎನ್ಜಿಇಎಫ್ ಬಡಾವಣೆಯ ಅಪಾರ್ಟ್ಮೆಂಟ್ವೊಂದರಲ್ಲಿ ವಾಸಿಸುತ್ತಿದ್ದರು.
ಕೌಟುಂಬಿಕ ಕಲಹ ಹಿನ್ನೆಲೆ 2022 ರಿಂದ ಇಬ್ಬರು ದೂರವಾಗಿದ್ದರು. 2023ರಲ್ಲಿ ವಿಚ್ಛೇದನ ಕೋರಿ ನಯನಾ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ. ಈ ಮಧ್ಯೆ ಮಂಜುನಾಥ್ ಪತ್ನಿ ಮನೆಗೆ ಹೋಗಿ ಇನ್ಮುಂದೆ ಜಗಳ ಮಾಡುವುದಿಲ್ಲ. ಒಟ್ಟಿಗಿದ್ದು ಚೆನ್ನಾಗಿ ನೋಡಿಕೊಳ್ಳುತ್ತೇನೆ, ತನ್ನೊಂದಿಗೆ ಬರುವಂತೆ ಪತ್ನಿಗೆ ವಿನಂತಿಸಿದ್ದ. ಆದರೆ ಪತ್ನಿ ನಿರಾಕರಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಬೆಳಗ್ಗೆ ಸಹ ಸುಮಾರು 8.20ರ ವೇಳೆ ಪತ್ನಿ ಮನೆಗೆ ಹೋಗಿದ್ದ ಮಂಜುನಾಥ್ ಒಂದಾಗಿ ಬಾಳೋಣ ತನ್ನೊಂದಿಗೆ ಬರುವಂತೆ ಮನವಿ ಮಾಡಿಕೊಂಡಿದ್ದ. ಆದರೆ ಪತ್ನಿ ತಿರಸ್ಕರಿಸಿದ್ದರಿಂದ ಕುಪಿತಗೊಂಡು ಸ್ಥಳದಿಂದ ಹೊರಟು ಹೋಗಿ 11 ಗಂಟೆ ಸುಮಾರಿಗೆ ಮತ್ತೆ ಮನೆ ಮುಂದೆ ಬಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದರು. ಇದರಿಂದ ಸುಟ್ಟಗಾಯದಿಂದ ಮಂಜುನಾಥ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಧಾರವಾಡ ಬಸ್ ನಿಲ್ಸಾಣದಲ್ಲಿ ವ್ಯಕ್ತಿ ಆತ್ಮಹತ್ಯೆ: ಸಿಸಿಟಿವಿ ಪರಿಶೀಲನೆ ಬಳಿಕ ಘಟನೆ ಬೆಳಕಿಗೆ