ಹಾವೇರಿ :ಜಿಲ್ಲೆಯ ವಿವಿಧೆಡೆ ಸಂಜೆಯಾಗುತ್ತಿದ್ದಂತೆ ಮಳೆರಾಯನ ಆರ್ಭಟ ಶುರುವಾಗುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಹಾವೇರಿ ನಗರ, ರಾಣೆಬೆನ್ನೂರು ಸೇರಿದಂತೆ ಹಲವೆಡೆ ವ್ಯಾಪಕ ಮಳೆಯಾಗುತ್ತಿದೆ. ವರುಣನ ಆರ್ಭಟಕ್ಕೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಫಸಲು ಹೊತ್ತು ನಿಂತಿರುವ ಮೆಕ್ಕೆಜೋಳ, ಹತ್ತಿ, ಸೋಯಾಬಿನ್, ಶೇಂಗಾ ಸೇರಿದಂತೆ ವಿವಿಧ ಬೆಳೆಗಳು ಮಳೆಗಾಹುತಿಯಾಗುತ್ತಿವೆ.
ಮಳೆರಾಯನ ಆರ್ಭಟದ ನಡುವೆ ಹಾವೇರಿ ಸಮೀಪದ ಕನಕಾಪುರ ಗ್ರಾಮದ ಬಳಿಯ ತುಂಗಾಮೇಲ್ದಂಡೆ ಯೋಜನೆಯ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಸಾವಿರಾರು ಎಕರೆ ಜಮೀನಿಗೆ ನುಗ್ಗಿದೆ. ಕಷ್ಟಪಟ್ಟು ಬೆಳೆದ ಬೆಳೆಗಳೆಲ್ಲಾ ಕಾಲುವೆ ನೀರಿನಲ್ಲಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಹೇಳಿದ್ದಾರೆ.
ರೈತ ಫಕ್ಕೀರಗೌಡ ಗಾಜಿಗೌಡ ಮಾತನಾಡಿದರು (ETV Bharat) ಇನ್ನೇನು ಮೆಕ್ಕೆಜೋಳ ಮತ್ತು ಸೋಯಾಬಿನ್ ಬೆಳೆಗಳ ಕಾಳುಗಳನ್ನು ಯಂತ್ರಕ್ಕೆ ಹಾಕಿಸಬೇಕಾಗಿತ್ತು. ಅಷ್ಟರಲ್ಲಿ ಕಾಲುವೆ
ಒಡೆದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎಂದು ಅನ್ನದಾತರು ಅಳಲು ತೋಡಿಕೊಂಡಿದ್ದಾರೆ.
ತುಂಗಾಮೇಲ್ದಂಡೆ ಕಾಲುವೆ ನೀರು ಜಮೀನಿಗೆ ನುಗ್ಗಿರುವುದು (ETV Bharat) ಈ ಕುರಿತು ರೈತ ಫಕ್ಕೀರಗೌಡ ಗಾಜಿಗೌಡ ಅವರು ಮಾತನಾಡಿ, ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆಯನ್ನ ಅವೈಜ್ಞಾನಿಕವಾಗಿ ನಿರ್ಮಿಸಿರುವುದೇ ಈ ಅವಘಡಕ್ಕೆ ಕಾರಣ ಎಂದಿದ್ದಾರೆ. ಅವೈಜ್ಞಾನಿಕ ಕಾಮಗಾರಿ ನಡುವೆ ಕಳಪೆ ಕಾಮಗಾರಿ ನಡೆದಿರುವದರಿಂದ ಕಾಲುವೆ ಒಡೆದಿದೆ ಎಂದು ಆರೋಪಿಸಿದ್ದಾರೆ.
ತುಂಗಾಮೇಲ್ದಂಡೆ ಕಾಲುವೆ ಒಡೆದಿರುವುದು (ETV Bharat) ಕಾಲುವೆ ಒಡೆದು ಎರಡು ದಿನಗಳಾದರೂ ಜಮೀನಿಗೆ ನೀರು ಹರಿಯುತ್ತಿರುವುದನ್ನು ತಡೆಯಲು ಅಧಿಕಾರಿಗಳು ವಿಫಲವಾಗಿದ್ದಾರೆ. ಕಾಲುವೆ ಒಡೆಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಹಾವೇರಿ ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳು ನೀರು ನಿಲ್ಲಿಸುವ ಭರವಸೆ ನೀಡಿದ್ದರು. ಆದರೆ ಹತ್ತಿರ ಹತ್ತಿರ ಎರಡು ದಿನವಾದರೂ ರೈತರ ಜಮೀನಿಗೆ ನುಗ್ಗುತ್ತಿರುವ ನೀರು ತಡೆಯಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ರೈತರು ಹೇಳಿದ್ದಾರೆ.
ತುಂಗಾಮೇಲ್ದಂಡೆ ಕಾಲುವೆ ಒಡೆದಿರುವುದು (ETV Bharat) ಅಧಿಕಾರಿಗಳ ನಿರ್ಲಕ್ಷ್ಯದಿಂದ ಮತ್ತಷ್ಟು ಪ್ರಮಾಣದ ಬೆಳೆಹಾನಿಯಾಗಿದೆ. ಇದಕ್ಕೆ ಜಿಲ್ಲಾಡಳಿತ ಮತ್ತು ತುಂಗಾ ಮೇಲ್ದಂಡೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂದು ಅನ್ನದಾತರು ದೂರಿದ್ದಾರೆ. ಈ ಕೂಡಲೇ ಅಧಿಕಾರಿಗಳು ಜಮೀನುಗಳಿಗೆ ನುಗ್ಗುತ್ತಿರುವ ನೀರನ್ನು ತಡೆಯಬೇಕು. ಬೆಳೆಹಾನಿಯಾದ ರೈತರ ಪ್ರತಿ ಎಕರೆ ಜಮೀನಿಗೆ ಕನಿಷ್ಠ 50 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ರೈತರಿಗೆ ಇನ್ನಿಲ್ಲದ ಸಂಕಷ್ಟ ತಂದಿದೆ : ಈ ಕುರಿತು ರೈತ ಮುನಾಫ್ ನದಾಫ್ ಅವರು ಮಾತನಾಡಿ, 'ಸರ್ಕಾರ ರೈತರು ದೇಶದ ಬೆನ್ನೆಲುಬು ಎನ್ನುತ್ತದೆ. ಆದರೆ ಸಂಕಷ್ಟದಲ್ಲಿ ಸಿಲುಕಿರುವ ರೈತರ ನೆರವಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಬರುತ್ತಿಲ್ಲ. ಕಳೆದ ವರ್ಷ ಅನಾವೃಷ್ಟಿಯಿಂದ ಬೆಳೆ ಹಾನಿ ಆಗಿತ್ತು. ಎರಡ್ಮೂರು ಬಾರಿ ಬಿತ್ತನೆ ಮಾಡಿದ ಬೀಜಗಳು ಸಹ ಮೊಳಕೆಯೊಡೆಯದೇ ಸಾಕಷ್ಟು ಹಾನಿಯಾಯಿತು. ಈ ವರ್ಷ ಅತಿವೃಷ್ಟಿಯಿಂದ ಸಾಕಷ್ಟು ಪ್ರಮಾಣದ ಬೆಳೆ ಹಾನಿಯಾಗಿದೆ. ಇದರ ಮಧ್ಯೆ ಇದೀಗ ಕಾಲುವೆ ಒಡೆದಿದ್ದು, ರೈತರಿಗೆ ಇನ್ನಿಲ್ಲದ ಸಂಕಷ್ಟ ತಂದಿದೆ. ಅಧಿಕಾರಿಗಳು ಜನಪ್ರತಿನಿಧಿಗಳು ಆದಷ್ಟು ಬೇಗ ರೈತರಿಗೆ ಪರಿಹಾರ ನೀಡಬೇಕು' ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ :ವಿಜಯಪುರ: ಮಳೆಗೆ ನೆಲಕಚ್ಚಿದ ಕಬ್ಬು, ಈರುಳ್ಳಿ; ಸಾಲ ಮಾಡಿ ಬೆಳೆ ಬೆಳೆದ ರೈತ ಕಂಗಾಲು - Vijayapura Rain