ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ನೂತನ ಮೇಯರ್ ಆಗಿ ರಾಮಪ್ಪ ಬಡಿಗೇರ್ ಹಾಗೂ ಉಪಮೇಯರ್ ಆಗಿ ದುರ್ಗಮ್ಮ ಬಿಜವಾಡ ಅವರು ಆಯ್ಕೆಯಾಗಿದ್ದಾರೆ. ಆದರೆ ಆಯ್ಕೆಯಾಗುತ್ತಿದಂತೆ ಮೇಯರ್ ಗೌನ್ ವಿಷಯ ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ಕಳೆದ ಎರಡು ಅವಧಿಯಲ್ಲಿ ಮೇಯರ್ ಆಗಿದ್ದಂತಹ ಈರೇಶ ಅಂಚಟಗೇರಿ ಹಾಗೂ ವೀಣಾ ಬರದ್ವಾಡ್ ಅವರು ಮೇಯರ್ ಗೌನ್ ಧರಿಸದೇ ತಮ್ಮ ಅವಧಿಯನ್ನು ಪೂರ್ಣಗೊಳಿಸಿದ್ದರು. ಆದರೆ ಇದೀಗ ನೂತನವಾಗಿ ಆಯುಕ್ತರಾದಂತಹ ರಾಮಣ್ಣ ಬಡಿಗೇರ್ ಅವರು ಎರಡು ವರ್ಷಗಳ ಬಳಿಕ ಮತ್ತೆ ಮೇಯರ್ ಗೌನ್ ಧರಿಸುವ ಮೂಲಕ ಹೊಸತಕ್ಕೆ ಸಾಕ್ಷಿಯಾಗಿದ್ದಾರೆ.
2022ರಲ್ಲಿ ಮೇಯರ್ ಆಗಿದ್ದ ಈರೇಶ ಅಂಚಟಗೇರಿ ಗೌನ್ ಧರಿಸುವುದನ್ನು ತಿರಸ್ಕರಿಸಿದ್ದರು. ಬ್ರಿಟಿಷ್ ಸಂಸ್ಕೃತಿಯ ಗೌನ್ ಇದು. ಗುಲಾಮಗಿರಿಯ ಸಂಕೇತ. ತಾವೇ ಶ್ರೇಷ್ಠ ಎಂಬುದನ್ನು ತೋರಿಸುತ್ತದೆ. ಪಾಲಿಕೆ ಆಡಳಿತದಲ್ಲಿ ಇಂತಹ ಗುಲಾಮಗಿರಿಯ ಸಂಸ್ಕೃತಿ ಸರಿಯಲ್ಲ ಎಂದು ಗೌನ್ ಧರಿಸುವುದನ್ನು ಬಿಟ್ಟಿದ್ದರು. ಅಷ್ಟೇ ಅಲ್ಲದೆ, ರಾಷ್ಟ್ರಪತಿ, ಮುಖ್ಯಮಂತ್ರಿ, ರಾಜ್ಯಪಾಲರು ಯಾರೇ ಬಂದರೂ ಗೌನ್ ಧರಿಸದೇ ಅವರನ್ನು ಸ್ವಾಗತಿಸಿದ್ದರು. ರಾಷ್ಟ್ರಪತಿಗಳಿಗೆ ಮಹಾನಗರ ಪಾಲಿಕೆಯ ವತಿಯಿಂದ ಆಯೋಜಿಸಿದ್ದ ಪೌರಸನ್ಮಾನ ಕಾರ್ಯಕ್ರಮದಲ್ಲಿ ಗೌನ್ ಧರಿಸದೆಯೇ ಸನ್ಮಾನಿಸಿದ್ದರು.
ಮುಂದೆ ಸಾಮಾನ್ಯ ಸಭೆಗಳಲ್ಲೂ ಗೌನ್ ಧರಿಸದೇ ಪಾಲ್ಗೊಂಡಿದ್ದರು. ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು. ಇದರಿಂದ ಎರಡ್ಮೂರು ಸಾಮಾನ್ಯ ಸಭೆಗಳಲ್ಲಿ ಭಾರಿ ಕೋಲಾಹಲ ಉಂಟಾಗಿ ಸಭೆಯೇ ಮೊಟಕುಗೊಂಡಿದ್ದ ಉದಾಹರಣೆಗಳಿವೆ. ಆಡಳಿತ ಪಕ್ಷದಲ್ಲೂ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಆದರೂ ಅಂಚಟಗೇರಿ ಮಾತ್ರ ಗೌನ್ ಧರಿಸುವ ಗೋಜಿಗೆ ಹೋಗಿರಲಿಲ್ಲ. ಕೊನೆಗೆ ಸರ್ಕಾರಕ್ಕೆ ಅವರೇ ಪತ್ರ ಬರೆದು ಗೌನ್ ಧರಿಸುವುದು ಕಡ್ಡಾಯವೇ ಎಂದು ಪ್ರಶ್ನಿಸಿದ್ದರು. ಸರ್ಕಾರ ಗೌನ್ ಧರಿಸುವುದು ಕಡ್ಡಾಯವಲ್ಲ. ಅದು ಮೇಯರ್ ಆದವರ ವಿವೇಚನೆಗೆ ಬಿಟ್ಟ ವಿಷಯ ಎಂದು ಸ್ಪಷ್ಟಪಡಿಸಿತ್ತು.