ಹುಬ್ಬಳ್ಳಿ:ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಲಿಂಗರಾಜ ಬೀರನೂರ(19) ಎಂಬವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ನಾಲ್ಕು ತಲುಪಿದೆ.
ಕಳೆದ ಭಾನುವಾರ ರಾತ್ರಿ ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡು 9 ಮಂದಿ ಮಾಲಾಧಾರಿಗಳು ಗಾಯಗೊಂಡಿದ್ದರು. ಇಂದು ಬೆಳಗ್ಗೆ ರಾಜು ಮೂಗೇರ ಎಂಬ ಮಾಲಾಧಾರಿ ಸಾವನ್ನಪ್ಪಿದ್ದಾರೆ. ನಿನ್ನೆ ನಿಜನಿಂಗಪ್ಪ ಬೇಪೂರಿ ಹಾಗೂ ಸಂಜಯ ಸವದತ್ತಿ ಎಂಬಿಬ್ಬರು ಮಾಲಾಧಾರಿಗಳು ಸಾವನ್ನಪ್ಪಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ (ETV Bharat) ಗಾಯಗೊಂಡ ಐವರಿಗೆ ಕೆಎಂಸಿಆರ್ಐನಲ್ಲಿ ಚಿಕಿತ್ಸೆ ಮುಂದುವರೆದಿದೆ. ನಾಲ್ವರ ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿದೆ. ಒಬ್ಬ ಗಾಯಾಳು ಚೇತರಿಕೆ ಕಂಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಕಿಮ್ಸ್ಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗಾಯಾಳುಗಳನ್ನು ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ನುರಿತ ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ವಿ. ಆದರೂ ಮೃತಪಟ್ಟಿದ್ದಾರೆ. ಮುಖ್ಯಮಂತ್ರಿಗಳು 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಹೆಚ್ಚಿನ ಪರಿಹಾರ ಕೊಡಿಸುವುದು ದೊಡ್ಡ ಕೆಲಸವಲ್ಲ. ಅವರನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇವೆ. ಆ ಕುಟುಂಬಕ್ಕೆ ಅನುಕೂಲವಾಗುವ ಕೆಲಸ ಮಾಡಲು ಪ್ರಯತ್ನಿಸುತ್ತೇವೆ. ಇನ್ನೂ ಐದಾರು ಜನರ ಪರಿಸ್ಥಿತಿ ಚಿಂತಾಜನಕವಾಗಿದೆ" ಎಂದರು.
ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ: ಚಿಕಿತ್ಸೆ ಫಲಿಸದೇ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು! - TWO AYYAPPA DEVOTEES DIED