ಹುಬ್ಬಳ್ಳಿ:ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ಆರೋಪಿ ವಿಶ್ವ ಅಲಿಯಾಸ್ ಗಿರೀಶನನ್ನು ಇಂದು ಸಿಐಡಿ ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಈ ಸಂದರ್ಭದಲ್ಲಿ ತಪ್ಪಾಯಿತು ಎಂದು ನ್ಯಾಯಾಧೀಶರಿಗೆ ಆರೋಪಿ ಕೈಮುಗಿದು ಕಣ್ಣೀರು ಹಾಕಿದ ಘಟನೆ ನಡೆಯಿತು.
ಹುಬ್ಬಳ್ಳಿಯ ಮೂರನೇ ಹೆಚ್ಚುವರಿ ದಿವಾಣಿ ನ್ಯಾಯಾಲಯದಲ್ಲಿ ಸಿಐಡಿ ಅಧಿಕಾರಿಗಳು ಹಾಜರುಪಡಿಸಿದ ಸಂದರ್ಭದಲ್ಲಿ ವಿಶ್ವ ಕಣ್ಣೀರು ಹಾಕಿದ್ದಾನೆ. ಇದೇ ಸಂದರ್ಭದಲ್ಲಿ ಆತನನ್ನು 15 ದಿನ ವಶಕ್ಕೆ ನೀಡುವಂತೆ ಸಿಐಡಿ ಅಧಿಕಾರಿಗಳು ಕೇಳಿಕೊಂಡರು. ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ದಿವಾಣಿ ನ್ಯಾಯಾಲಯದ ನ್ಯಾಯಾಧೀಶ ನಾಗೇಶ್ ನಾಯ್ಕ್ 8 ದಿನಗಳವರೆಗೆ ಸಿಐಡಿ ವಶಕ್ಕೆ ನೀಡಿ ಆದೇಶ ನೀಡಿದರು.
ಕಸ್ಟಡಿಗೆ ನೀಡುತ್ತಿದ್ದಂತೆ ಮತ್ತೆ ಬೆಂಡಿಗೇರಿ ಪೊಲೀಸ್ ಠಾಣೆಗೆ ಸಿಐಡಿ ಅಧಿಕಾರಿಗಳು ಆರೋಪಿಯನ್ನು ಕರೆದೊಯ್ದರು. ಬಳಿಕ ಸ್ಥಳ ಮಹಜರು ಮಾಡಲಿದ್ದಾರೆ.
ಅಂಜಲಿ ಕೊಲೆ ಪ್ರಕರಣ :ಪ್ರೀತಿ ನಿರಾಕರಿಸಿದ್ದ ಕಾರಣಕ್ಕೆ ಕಳೆದ ಬುಧವಾರ (ಮೇ 15) ಬೆಳಗ್ಗೆ ಹುಬ್ಬಳ್ಳಿಯ ವೀರಾಪುರ ಓಣಿಯ ನಿವಾಸಿ ಅಂಜಲಿ (20) ಮನೆಗೆ ನುಗ್ಗಿದ ಯುವಕ ಚಾಕುವಿನಿಂದ ಎದೆ, ಹೊಟ್ಟೆ ಹಾಗೂ ಕುತ್ತಿಗೆ ಇರಿದು ವಿಶ್ವ ಪರಾರಿಯಾಗಿದ್ದ. ಏಕಾಏಕಿ ಚಾಕುವಿನಿಂದ ಹಲ್ಲೆ ಮಾಡಿದ್ದರಿಂದ ಮನೆಯವರ ಎದುರಲ್ಲೇ ಅಂಜಲಿ ಕೊನೆಯುಸಿರೆಳೆದಿದ್ದಳು. ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ವಿಶ್ವ (21) ಎಂಬಾತನನ್ನು ದಾವಣಗೆರೆಯಲ್ಲಿ ರೈಲ್ವೆ ಪೊಲೀಸರ ನೆರವಿನೊಂದಿಗೆ ಧಾರವಾಡ ಜಿಲ್ಲೆಯ ಪೊಲೀಸರು ಬಂಧಿಸಿ ಹುಬ್ಬಳ್ಳಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣವಾದ ಕೆಲ ದಿನಗಳಲ್ಲೇ ಅಂಜಲಿ ಹತ್ಯೆ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಇದನ್ನೂಓದಿ:ಅಡ್ಡಾದಿಡ್ಡಿ ಕಾರು ಚಾಲನೆ ಆರೋಪ: ಸುಮೊಟೊ ಪ್ರಕರಣ ದಾಖಲಿಸಿಕೊಂಡ ಪೊಲೀಸರು - Suo Moto case