ದಾವಣಗೆರೆ: ಹುಬ್ಬಳ್ಳಿಯ ಯುವತಿ ಅಂಜಲಿ ಕೊಲೆ ಪ್ರಕರಣದ ಆರೋಪಿಯನ್ನು ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಪೊಲೀಸರು ಬಂಧಿಸಿದ್ದಾರೆ. ಈ ಬಂಧನಕ್ಕೂ ಮುನ್ನ ಆರೋಪಿ ರೈಲಿನಿಂದ ಬಿದ್ದು ಗಂಭೀರ ಸ್ವರೂಪದ ಗಾಯ ಮಾಡಿಕೊಂಡಿದ್ದಾನೆ.
ಸಂಪೂರ್ಣ ವಿವರ: ಅಂಜಲಿ ಕೊಲೆಗೈದ ಬಳಿಕ ಆರೋಪಿ ಗಿರೀಶ್, ಹುಬ್ಬಳ್ಳಿಯಿಂದ ರೈಲಿನಲ್ಲಿ ಹೊರಟಿದ್ದಾನೆ. ಇದೇ ರೈಲಿನಲ್ಲಿ ಮಹಿಳೆಯೊಬ್ಬರಿಗೆ ಚಾಕು ತೋರಿಸಿ ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಆತನನ್ನು ಹಿಡಿದ ಸಾರ್ವಜನಿಕರು ಥಳಿಸಲು ಮುಂದಾದರು. ಇದರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ದಾವಣಗೆರೆ ತಾಲೂಕಿನ ಮಾಯಕೊಂಡ ಸಮೀಪ ಚಲಿಸುತ್ತಿದ್ದ ರೈಲಿನಿಂದ ಜಿಗಿದಿದ್ದಾನೆ.
ಇದರ ಪರಿಣಾಮ, ತಲೆ ಹಾಗೂ ಮುಖಕ್ಕೆ ಗಂಭೀರ ಸ್ವರೂಪದ ಗಾಯಗಳಾದವು. ಯುವಕನನ್ನು ಗಮನಿಸಿದ ಸ್ಥಳೀಯರು ತಕ್ಷಣ ಆಂಬ್ಯುಲೆನ್ಸ್ ಮೂಲಕ ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ. ಈ ವಿಚಾರ ದಾವಣಗೆರೆ ರೈಲ್ವೆ ಪೊಲೀಸರಿಗೆ ಗೊತ್ತಾಗಿದೆ. ತಕ್ಷಣ ಸ್ಥಳಕ್ಕೆ ಬಂದ ಅವರು ಆರೋಪಿಯನ್ನು ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಆತ ಕೊಟ್ಟ ಮಾಹಿತಿಯಿಂದ ಪೊಲೀಸರಿಗೆ ಅನುಮಾನ ಮೂಡಿದೆ. ಬಳಿಕ ಮತ್ತಷ್ಟು ವಿಚಾರಣೆ ನಡೆಸಿದ್ದು, ಆರೋಪಿ ಸತ್ಯ ಬಾಯಿಬಿಟ್ಟಿದ್ದಾನೆ. ಪೊಲೀಸರಿಗೆ ಈತನೇ ಅಂಜಲಿಯನ್ನು ಹತ್ಯೆ ಮಾಡಿದ ಆರೋಪಿ ಎಂದು ಗೊತ್ತಾಗಿದೆ.
ರೈಲ್ವೆ ಪಿಎಸ್ಐ ನಾಗರಾಜ್ ಹೇಳಿದ್ದೇನು?:ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯ ಪಿಎಸ್ಐ ನಾಗರಾಜ್ 'ಈಟಿವಿ ಭಾರತ್'ಗೆ ಪ್ರತಿಕ್ರಿಯಿಸಿ, "ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಂದಿಗೆ ಕಿರಿಕ್ ಮಾಡಿರುವ ಆರೋಪಿ ಚಾಕು ತೆಗೆದು ಹಲ್ಲೆಗೆ ಯತ್ನಿಸಿದ್ದಾನೆ. ಆಗ ಮಹಿಳೆ ಚೀರಿಕೊಂಡಿದ್ದಾರೆ. ಕುಟುಂಬಸ್ಥರು, ಸಾರ್ವಜನಿಕರು ಥಳಿಸಲು ಯತ್ನಿಸಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಆರೋಪಿ ಗಿರೀಶ್ ರೈಲಿನಿಂದ ಜಿಗಿದಿದ್ದಾನೆ. ಸ್ಥಳೀಯರು ಚಿಕಿತ್ಸೆ ಕೊಡಿಸಲು ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ನಂತರ ಪೊಲೀಸರು ವಿಚಾರಣೆ ನಡೆಸಿದಾಗ ಕೊಟ್ಟ ಮಾಹಿತಿ ಅನುಮಾನಾಸ್ಪದವಾಗಿತ್ತು. ಆದ್ದರಿಂದ ಪ್ರಥಮ ಚಿಕಿತ್ಸೆ ಕೊಡಿಸಿ ವಶಕ್ಕೆ ಪಡೆದು ಮತ್ತೆ ವಿಚಾರಣೆ ನಡೆಸಿದ್ದು, ಈತನೇ ಹುಬ್ಬಳ್ಳಿಯ ಅಂಜಲಿಯನ್ನು ಕೊಲೆ ಮಾಡಿದ ಹಂತಕ ಎಂದು ತಿಳಿದು ಬಂದಿದೆ. ಎಫ್ಐಆರ್ ದಾಖಲಿಸಿ ಹುಬ್ಬಳ್ಳಿ ಪೊಲೀಸರಿಗೆ ಒಪ್ಪಿಸಿದ್ದೇವೆ" ಎಂದು ಮಾಹಿತಿ ನೀಡಿದ್ದಾರೆ.
ಆರೋಪಿ ಹೇಳಿದ್ದೇನು?:ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಸಿಬ್ಬಂದಿ ವಿಚಾರಿಸಿದಾಗ, "ನನ್ನ ಹೆಸರು ಗಿರೀಶ್. 21 ವರ್ಷ. ಊರು ಹುಬ್ಬಳ್ಳಿ. ನಾನು ಮೈಸೂರಿಗೆ ಬಂದಿದ್ದು, ಮೈಸೂರಿನಿಂದ ಹುಬ್ಬಳ್ಳಿಗೆ ಹೋಗಬೇಕಿತ್ತು. ನನ್ನ ಹತ್ತಿರ ಯಾವುದೇ ವಸ್ತುಗಳಿರಲಿಲ್ಲ. ನಾನು ರೈಲಿನಿಂದ ಬಿದ್ದೆ. ಎಲ್ಲಿ ಘಟನೆ ನಡೆಯಿತು ಎಂಬುದು ತಿಳಿದಿಲ್ಲ. ಯಾವ ಮಹಿಳೆಗೂ ಚಾಕು ಹಾಕಿಲ್ಲ. ನನ್ನ ಬಳಿ ಯಾವ ಚಾಕೂ ಇಲ್ಲ" ಎಂದು ಹೇಳಿದ್ದಾನೆ.
ಇದನ್ನೂ ಓದಿ:ಹುಬ್ಬಳ್ಳಿ ಅಂಜಲಿ ಕೊಲೆ ಆರೋಪಿ ಬಂಧನ: ರೈಲಿನಿಂದ ಬಿದ್ದು, ತಲೆ ಮುಖಕ್ಕೆ ಗಾಯ - Anjali Murder Accused Arrested