ಬೆಂಗಳೂರು:ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರಿ ಜಾಗಗಳ ಸಂರಕ್ಷಣೆಗಾಗಿ 'ಲ್ಯಾಂಡ್ ಬೀಟ್ ಆ್ಯಪ್' ವ್ಯವಸ್ಥೆ ತಂದಿರುವ ರಾಜ್ಯ ಸರ್ಕಾರ, ಲ್ಯಾಂಡ್ ಬೀಟ್ ಆ್ಯಪ್ ಮೂಲಕ ಕಂದಾಯ ಇಲಾಖೆ ಸೇರಿ ಹಲವು ಇಲಾಖೆಗಳ 1.1 ಕೋಟಿ ಎಕರೆ ವಿಸ್ತೀರ್ಣದ ಜಾಗ ಗುರುತಿಸಿದೆ. ಇದರಲ್ಲಿ 26 ಲಕ್ಷ ಎಕರೆ ಕಂದಾಯ ಇಲಾಖೆಗೆ ಸೇರಿದೆ. ಇದೀಗ ಈ ಜಮೀನನ್ನು ರಕ್ಷಣೆ ಮಾಡಲು ಇಲಾಖೆ ಮುಂದಾಗಿದ್ದು, ಒತ್ತುವರಿದಾರರಿಗೆ ನಡುಕ ಪ್ರಾರಂಭವಾಗಿದೆ.
ಕಂದಾಯ ಇಲಾಖೆಯ ಜಮೀನಿನಲ್ಲಿ 13.7 ಲಕ್ಷ ಎಕರೆ ಒತ್ತುವರಿಯಾಗಿರುವ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಗಳು ಗುರುತಿಸಿದ್ದಾರೆ. ಇದರಲ್ಲಿ ಅರ್ಜಿ ನಮೂನೆ 50, 53 ಮತ್ತು 57ರಡಿ 10 ಲಕ್ಷಕ್ಕೂ ಹೆಚ್ಚು ಅರ್ಜಿಗಳಿಗೆ ಸಂಬಂಧಿಸಿದ ಆಸ್ತಿಯಾಗಿರುವುದು ಗೊತ್ತಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳ ಮಹಜರು ನಡೆಸಿ, ಒತ್ತುವರಿಯಾಗಿದ್ದರೆ ಅವುಗಳ ವಿವರಗಳನ್ನು ಆ್ಯಪ್‌ನಲ್ಲಿ ಹಂಚಿಕೊಳ್ಳಲಿದ್ದಾರೆ. ಇದರ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ಕ್ರಮ ವಹಿಸಲಿದ್ದಾರೆ. ಸದ್ಯ ರಾಜ್ಯಾದ್ಯಂತ 5.90 ಲಕ್ಷ ಸ್ಥಳಗಳನ್ನು ಮಹಜರು ಮಾಡಲಾಗಿದೆ. ಸರ್ಕಾರಿ ಜಾಗಗಳ ಮಹಜರು ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯಲಿದೆ.
ಸೆಪ್ಟಂಬರ್ 2ರಿಂದಲೇ ಒತ್ತುವರಿ ತೆರವು ಆರಂಭವಾಗಿದ್ದು, ಅಸಲಿ ಬಗರ್‌ಹುಕುಂ ಸಾಗುವಳಿದಾರರು, ಒತ್ತುವರಿ ಪ್ರಮಾಣವೆಷ್ಟು ಎಂಬುದು ಪತ್ತೆ ಹಚ್ಚಿ ಪೋಡಿ ಮಾಡಿಕೊಡುವ ಕಾರ್ಯಕ್ಕೂ ಚಾಲನೆ ಸಿಕ್ಕಿದೆ. ಇದಲ್ಲದೆ, ಜಿಯೋ ಫೆನ್ಸಿಂಗ್ ಮೂಲಕ ಆಸ್ತಿಗಳ ಸಂರಕ್ಷಣೆ ಜೊತೆಗೆ ಒತ್ತುವರಿ ತೆರವು ಅಪ್‌ಡೇಟ್‌ಗೆ ಡ್ಯಾಶ್‌ಬೋರ್ಡ್ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಪ್ರತ್ಯೇಕ ಆ್ಯಪ್ ಅಭಿವೃದ್ಧಿಪಡಿಸುವ ಚಿಂತನೆಯೂ ಇದೆ. ಹಾಗೆಯೇ ಪೋಡಿ ದುರಸ್ತಿಯು ಅಭಿಯಾನ ಮಾದರಿಯಲ್ಲಿ ಆರಂಭವಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮ-ಸಕ್ರಮದಡಿ ಜಮೀನು ಮಂಜೂರು ಮಾಡಿಕೊಂಡ 10 ಲಕ್ಷ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಕಂದಾಯ ಇಲಾಖೆ ಮುಂದಾಗಿದ್ದು, ಇದರಿಂದ ಸರ್ಕಾರದ ಆಸ್ತಿಯ ಸಂರಕ್ಷಣೆ ಕಾರ್ಯ ಅನುಷ್ಠಾನವಾಗಲಿದೆ. ನಮೂನೆ 1-5 ಪೋಡಿ ದುರಸ್ತಿಗೆ ಡಿಜಿಟಲ್ ಆ್ಯಪ್ ಬಳಸಿಕೊಳ್ಳಲಾಗುತ್ತಿದೆ. ಡಿಜಿಟಲ್ ಕಡತಗಳು ಸ್ವಯಂ ತಯಾರಾಗಲಿದ್ದು, ರೈತರ ಅರ್ಜಿಗೆ ಕಾಯುವ ಅಗತ್ಯ ಇಲ್ಲ.