ಬೆಳಗಾವಿ: ಬೆಳಗಾವಿ ತೋಟಗಾರಿಕೆ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಂದ ವಿವಿಧ ಯೋಜನೆಗಳಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ ಅವರು, 2023-24ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ತೋಟಗಾರಿಕೆ ಬೆಳೆಗಳಾದ ಬಾಳೆ, ದ್ರಾಕ್ಷಿ, ದಾಳಿಂಬೆ, ಮಾವು, ಅಂಜೂರ, ಡ್ರಾಗನ್ ಹಣ್ಣು, ಗೇರು, ಸ್ಟ್ರಾಬೇರಿ, ಜಾಮುನು, ಪೇರಲ, ಬೆಣ್ಣೆ ಹಣ್ಣು, ಹೈಬ್ರಿಡ್ ತರಕಾರಿ ಹಾಗೂ ವಿವಿಧ ಹೂವು ಬೆಳೆಗಳನ್ನು ಬೆಳೆಯಲು ಬೆಳೆಗಳ ಅನುಗುಣವಾಗಿ ರೂ.10 ಸಾವಿರ ದಿಂದ 30 ಸಾವಿರ ವರೆಗೆ ಪ್ರತಿ ಹೆಕ್ಟೇರ್ಗೆ ಸಹಾಯಧನವನ್ನು ನೀಡಲಾಗುತ್ತದೆ.
ನೀರಾವರಿ ವ್ಯವಸ್ಥೆಗಾಗಿ ಸಮುದಾಯ ಕೃಷಿ ಹೊಂಡಕ್ಕೆ 4 ಲಕ್ಷ ರೂ. ಹಾಗೂ ವೈಯಕ್ತಿಕ ಕೃಷಿಹೊಂಡಕ್ಕೆ 75 ಸಾವಿರ ರೂ. ಸಹಾಯಧನ ನೀಡಲಾಗುವುದು. ಮತ್ತು ಸಂರಕ್ಷಿತ ಬೇಸಾಯ ಪದ್ಧತಿ ಅಳವಡಿಸಿಕೊಂಡು ಪಾಲಿಮನೆ ನಿರ್ಮಿಸಲು ಪ್ರತಿ 10 ಗುಂಟೆಗೆ 4.70 ಲಕ್ಷ ರೂ. ಹಾಗೂ ಪ್ಲಾಸ್ಟಿಕ್ ಹೊದಿಕೆಗಾಗಿ 16 ಸಾವಿರ ರೂ. ಪ್ರತಿ ಹೆಕ್ಟೇರ್ಗೆ ಸಹಾಯಧನವನ್ನು ನೀಡಲಾಗುವುದು ಎಂದರು. ಅಷ್ಟೇ ಅಲ್ಲದೆ ಕೋಯ್ಲೋತ್ತರ ನಿರ್ವಹಣೆಗಾಗಿ ಪ್ಯಾಕ್‌ಹೌಸ್ ನಿರ್ಮಿಸಿಕೊಳ್ಳಲು ಗರಿಷ್ಠ 2.00 ಲಕ್ಷ, ಪ್ರಾಥಮಿಕ ಸಂಸ್ಕರಣಾ ಘಟಕ ನಿರ್ಮಿಸಲು ಗರಿಷ್ಠ 10 ಲಕ್ಷ ರೂ., ಕೋಲ್ಡ್ ಸ್ಟೋರೆಜ್ ಘಟಕ ನಿರ್ಮಿಸಲು ಗರಿಷ್ಠ 2,800 ರೂ. ಪ್ರತಿ ಟನ್‌ನಂತೆ 5 ಸಾವಿರ ಟನ್ ವರೆಗೆ ಸಹಾಯಧನ ನೀಡಲಾಗುವುದು.
ಹಣ್ಣು ಮಾಗಿಸುವ ಘಟಕಕ್ಕೆ ಪ್ರತಿ ಟನ್‌ಗೆ 35 ಸಾವಿರ ರೂ. ಗರಿಷ್ಠ 300 ಟನ್ ಸಾಮರ್ಥ್ಯದ ವರೆಗೆ ಪ್ರತಿ ಫಲಾನುಭವಿಗಳಿಗೆ ಸಹಾಯಧನ ನೀಡಲಾಗುವುದು. ಹಾಗೂ ತರಕಾರಿ ಮತ್ತು ಹಣ್ಣು ಮಾರಾಟ ಮಾಡಲು ತಳ್ಳುವ ಗಾಡಿಗೆ ರೂ. 15 ಸಾವಿರ ರೂ. ಸಹಾಯಧನವನ್ನು ಮಾರ್ಗಸೂಚಿಯನ್ವಯ ಗರಿಷ್ಠ ವೆಚ್ಚವನ್ನು ಪರಿಗಣಿಸಿ ನೀಡಲಾಗುವುದು ಎಂದು ಉಪನಿರ್ದೇಶಕ ಮಹಾಂತೇಶ ಮುರಗೋಡ ತಿಳಿಸಿದರು.