ಬಳ್ಳಾರಿ: ''ತೆಲುಗಿನ ಬಹುನಿರೀಕ್ಷಿತ 'ಪುಷ್ಪ-2' ಚಿತ್ರದ ವಿತರಕನಾಗಿ ಅದರ ಯಶಸ್ಸು ಬಯಸಿದ್ದೇನೆಯೇ ಹೊರತು, ಕನ್ನಡದ ಸ್ಟಾರ್ ನಟ ಯಶ್ ಅವರನ್ನಾಗಿಲಿ ಅಥವಾ ಅವರ ಕೆಜಿಎಫ್ ಸರಣಿ ಚಿತ್ರಗಳನ್ನಾಗಲಿ ಅಪಮಾನಿಸುವ ಉದ್ದೇಶ ಹೊಂದಿಲ್ಲ'' ಎಂದು 'ನಟರಾಜ' ಸಿನಿಮಾ ಮಂದಿರಗಳ ಮಾಲೀಕ, ಚಿತ್ರವಿತರಕ ಲಕ್ಷ್ಮೀಕಾಂತ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಸೌತ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ 'ಪುಷ್ಪ-2' ಸಿನಿಮಾದ ವಿಶಾಲ ಕರ್ನಾಟಕ ವಿತರಣೆಯನ್ನು ನಾನೇ ಪಡೆದುಕೊಂಡಿದ್ದೇನೆ. ಇತ್ತೀಚೆಗೆ ಚಿತ್ರತಂಡ ಹೈದರಾಬಾದ್‌ನಲ್ಲಿ ಕರೆದಿದ್ದ ಮಾಧ್ಯಮಗೋಷ್ಟಿಗೆ ನಾನೂ ಹೋಗಿದ್ದೆ. ಚಿತ್ರ ಕೆಜಿಎಫ್-2 ಸಿನಿಮಾದ ದಾಖಲೆಯನ್ನೂ ಮೀರಿ ಯಶಸ್ಸು ಗಳಿಸಲಿ ಎಂದು ಅಲ್ಲಿ ಹೇಳಿದ್ದೆ. ಇದರಲ್ಲಿ ತಪ್ಪು ಹುಡುಕಿರುವ ಕೆಲ ಮಂದಿ ಸಾಮಾಜಿಕ ಮಾಧ್ಯಮದಲ್ಲಿ ವಿವಾದ ಸೃಷ್ಟಿ ಮಾಡುತ್ತಿದ್ದಾರೆ'' ಎಂದು ಬೇಸರ ವ್ಯಕ್ತಪಡಿಸಿದರು.