ಹುಬ್ಬಳ್ಳಿ:ಮಂಗಳವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮುಂದಿನ ಸಿಎಂ ಜಿ.ಪರಮೇಶ್ವರ್ ಎಂದು ಬೆಂಬಲಿಗರು ಘೋಷಣೆ ಕೂಗಿದ್ದರು. ಇದಕ್ಕೆ ಹಾಗೂ ರಾಜ್ಯದಲ್ಲಿ ದಲಿತ ಸಿಎಂ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, "ನಾವೇನು ಸನ್ಯಾಸಿಗಳಾ? ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ವಾತಾವರಣವಿಲ್ಲ. ಸಿದ್ದರಾಮಯ್ಯ ಸಿಎಂ ಇದ್ದಾರೆ" ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ (ETV Bharat) ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ರಾಜ್ಯದಲ್ಲಿ ಕಾನೂನು ವ್ಯವಸ್ಥೆ ವ್ಯವಸ್ಥಿತವಾಗಿದೆ. ಯಾವುದೇ ಸಂದರ್ಭದಲ್ಲಿ ಕೈಮೀರಿ ಹೋಗಿಲ್ಲ. ಸ್ವಾಭಾವಿಕವಾಗಿ ಕೆಲ ಘಟನೆಗಳು ನಡೆಯುತ್ತವೆ, ನಡೆದಿವೆ. ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ಬಂದು ಕಾನೂನು ಸುವ್ಯವಸ್ಥೆ ಕೆಟ್ಟಿದೆ ಎಂದಿದ್ರು. ಕೈಗಾರಿಕೆಗಳು ಬಂಡವಾಳ ಹೂಡಲು ಬರುತ್ತಿಲ್ಲ ಎಂದು ದೊಡ್ಡ ಅಪವಾದ ಮಾಡಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು. ಯಾವ ಕೈಗಾರಿಕೋದ್ಯಮಿಯೂ ಇಲ್ಲಿಂದ ಹೊರಗೋಗ್ತೀನಿ ಎಂದಿಲ್ಲ. ಹೊರಗಿನವರು ಬಂದವರು ಯಾರೂ ಅಪವಾದ ಮಾಡಿಲ್ಲ. ಸೀತಾರಾಮನ್ ಹೇಳಿರೋ ಮಾತು ಸತ್ಯಕ್ಕೆ ದೂರವಾದ ಮಾತು. ಹೀಗಾಗಿ ನಾನು ಸ್ಪಷ್ಟೀಕರಣ ಕೊಡುತ್ತಿದ್ದೇನೆ" ಎಂದರು.
ಇದೆಲ್ಲ ನಾವು ಅಧಿಕಾರಕ್ಕೆ ಬಂದ ಮೇಲೆ ಆಗಿದೆಯಾ? :"ಕೊಲೆ, ಕಳ್ಳತನ, ಡ್ರಗ್ಸ್ ದಂಧೆ ಆಗಿರುವುದು ಎಲ್ಲವೂ ನಿಜ. ಎಷ್ಟರ ಮಟ್ಟಿಗೆ ಇದೆ ಅನ್ನೋದು ಮುಖ್ಯ. ಇದೆಲ್ಲ ನಾವು ಅಧಿಕಾರಕ್ಕೆ ಬಂದ ಮೇಲೆ ಆಗಿದೆಯಾ? ಬಿಜೆಪಿ ಅಧಿಕಾರದಲ್ಲಿ ಕೊಲೆ, ಕಳ್ಳತನ ಕಡಿಮೆ ಆಗಿದೆಯಾ? ನಾವು ಪೊಲೀಸರ ಜೊತೆ ಮೀಟಿಂಗ್ ಮಾಡೋವಾಗ ಡ್ರಗ್ಸ್ ದಂಧೆ ನಿಲ್ಲಿಸೋ ಘೋಷಣೆ ಮಾಡಿದ್ದೇವೆ. ದೊಡ್ಡ ಆಂದೋಲನ ಆರಂಭ ಮಾಡಿದ್ದೇವೆ. ಸಾವಿರಾರು ಕೋಟಿ ರೂಪಾಯಿ ಡ್ರಗ್ಸ್ ಸುಟ್ಟು ಹಾಕಿದ್ದೇವೆ. ಕೆಲವು ಡ್ರಗ್ಸ್ ದಂಧೆಕೋರರಿಗೆ ಗುಂಡು ಹಾಕೋ ಪ್ರಯತ್ನ ಆಗಿದೆ. ಈ ಭಾಗದಲ್ಲೂ ಡ್ರಗ್ಸ್ ಮಾನಿಟರಿಂಗ್ ಕೆಲಸ ಮಾಡ್ತೀದ್ದೇವೆ. ಡ್ರಗ್ಸ್ ಹಾವಳಿ ಮೊದಲಿಗಿಂತ ಕಡಿಮೆ ಆಗಿದೆ. ಬಹಳ ಕಠಿಣ ಕ್ರಮ ಕೈಗೊಂಡಿದ್ದೇವೆ" ಎಂದು ವಿವರಿಸಿದರು.
"ಹುಬ್ಬಳ್ಳಿಯಲ್ಲಿ ನೂರಾರು ಜನರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಅದಕ್ಕೂ ಟೀಕೆ ಬಂತು, ಫೆಡ್ಲರ್ಗಳನ್ನು ಯಾಕೆ ಕರೆದಿಲ್ಲ ಅಂತ. ನಿನ್ನೆ ಕೂಡಾ ಹುಬ್ಬಳ್ಳಿಯಲ್ಲಿ ಒಬ್ಬ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಅವನ ಬಳಿ ಕೆಜಿ ಗಟ್ಟಲೆ ಗಾಂಜಾ ಸಿಕ್ಕಿದೆ. ನೂರಾರು ಫೆಡ್ಲರ್ಗಳನ್ನು ವಶಕ್ಕೆ ಪಡೆದಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ನೈಜೇರಿಯಾ ಸೇರಿದಂತೆ ವಿದೇಶ ಮೂಲದವರನ್ನು ಅರೆಸ್ಟ್ ಮಾಡಿದ್ದೇವೆ. ಡ್ರಗ್ಸ್ ಎಲ್ಲಿಂದ ಆದರೂ ಬರಲಿ, ನಾವು ಅವರ ಮೂಲಕ್ಕೆ ಹೋಗ್ತೀವಿ"" ಎಂದು ಮಾಹಿತಿ ನೀಡಿದರು.
"ಸೈಬರ್ ಕ್ರೈಮ್ಗಳು ಜಾಸ್ತಿ ಆಗಿವೆ. ಸೈಬರ್ ಕ್ರೈಂ ತಡೆಗಟ್ಟಲು ಕ್ರಮ ತೆಗೆದುಕೊಂಡಿದ್ದೇವೆ. ಸೈಬರ್ ಕ್ರೈಂ ಪೊಲೀಸ್ ಠಾಣೆಗಳ ಸಂಖ್ಯೆ ಜಾಸ್ತಿ ಮಾಡಿದ್ದೇವೆ. ಸಾವಿರಾರು ಜನರಿಗೆ ನಾವು ಹಣ ಕೊಡಿಸಿದ್ದೇವೆ. ಇಷ್ಟೆಲ್ಲ ಕ್ರಮ ಕೈಗೊಂಡು ಕಾನೂನು ಸುವ್ಯವಸ್ಥೆ ಸರಿಯಾಗಿದೆ. ಎಲ್ಲರೂ ಶಾಂತಿಯುತವಾಗಿ ಹಬ್ಬ ಮಾಡಿದ್ದೇವೆ. ಗಣೇಶ ಹಬ್ಬದಲ್ಲಿ ಎಲ್ಲೂ ಗಲಾಟೆ ಆಗಿಲ್ಲ. ರಂಜಾನ್ ಹಬ್ಬ ಕೂಡ ಮಾಡಿದ್ದೇವೆ" ಎಂದರು.
ಸೀತಾರಾಮನ್ ದೊಡ್ಡ ಆರೋಪ ಮಾಡಿದ್ದಾರೆ;"ನಿರ್ಮಲಾ ಸೀತಾರಾಮನ್ ಅವರು ಎಸ್ಸಿ ಎಸ್ಟಿ ಹಣ ಡೈವರ್ಟ್ ಮಾಡಿದ್ದಾರೆ ಎನ್ನುವ ದೊಡ್ಡ ಆರೋಪ ಮಾಡಿದ್ದಾರೆ. ಅವರಿಗೆ ಯಾರು ಅಂಕಿ ಸಂಖ್ಯೆ ಕೊಟ್ಟಿದ್ದು? ನಿಮ್ಮ ತಟ್ಟೆಯಲ್ಲಿ ಏನು ಬಿದ್ದಿದೆ ನೋಡಿಕೊಳ್ಳಬೇಕು. ಬೇರೆಯವರ ತಟ್ಟೆಯಲ್ಲಿ ನೊಣ ಬಿದ್ದಿದೆ ಅಂತಾ ಹೇಳೋದಲ್ಲ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ನಾವು ಹಣ ಡೈವರ್ಟ್ ಮಾಡಿಲ್ಲ, ಕಾರ್ಯಕ್ರಮಕ್ಕೆ ಹಣ ಉಪಯೋಗ ಮಾಡಿದ್ದೇವೆ. ಬಿಜೆಪಿಯವರು ಕೇವಲ ಪ್ರಚಾರಕ್ಕೆ ಮಾತಾಡ್ತಾರೆ" ಎಂದು ರಾಹುಲ್ ಗಾಂಧಿ ವಿರುದ್ಧ ಮಾತಾಡಿದ ಅನುರಾಗ್ ಠಾಕೂರ್ಗೆ ತಿರುಗೇಟು ನೀಡಿದರು.
ಬೆಂಗಳೂರಿನಲ್ಲಿ ನಾಯಿ ಮಾಂಸ ಮಾರಾಟ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, "ನಾವು ಪರೀಕ್ಷೆ ಮಾಡಿಸಿದ್ದೇವೆ. ಅದು ನಾಯಿ ಮಾಂಸ ಅಲ್ಲ. ಅಲ್ಲಿ ಹೋಗಿ ಕೆಲವರು ಗಲಾಟೆ ಮಾಡಿದ್ದಾರೆ. ಪುನೀತ್ ಕೆರೆಹಳ್ಳಿ ಶಾಂತಿ ಭಂಗ ಮಾಡಿದ್ದಾರೆ. ಅವರ ಮೇಲೆ ಕ್ರಮ ಆಗಿದೆ. ಹಿಂದೆ ಕೂಡಾ ಅವರ ಮೇಲೆ ಕೆಲ ಕೇಸ್ಗಳು ದಾಖಲಾಗಿವೆ." ಎಂದು ತಿಳಿಸಿದರು.
"ವಾಲ್ಮೀಕಿ ಹಗರಣದ ಬಗ್ಗೆ ನಮಗೆ ಮಾಹಿತಿ ಬಂದ ಕೂಡಲೇ ಎಸ್ಐಟಿ ರಚನೆ ಮಾಡಿದ್ದೇವೆ. ಚಂದ್ರಶೇಖರ್ ಆತ್ಮಹತ್ಯೆ ಬಳಿಕ ಡೆತ್ನೋಟ್ ಸಿಕ್ಕ ಬೆನ್ನಲ್ಲೇ ಎಸ್ಐಟಿ ರಚನೆ ಮಾಡಿದ್ದೇವೆ. ನಂತರ ಸಿಬಿಐ, ಇಡಿ ಕೂಡ ತನಿಖೆ ಮಾಡ್ತಿದ್ದಾರೆ. ಇನ್ನೂ ವರದಿ ಬರಬೇಕಿದೆ. ಆದರೆ ಬಿಜೆಪಿಯವರು ಸುಮ್ಮನೆ ಆಪಾದನೆ ಮಾಡುತ್ತಿದ್ದಾರೆ. ನಾಗೇಂದ್ರ ಅವರ ರಾಜೀನಾಮೆ ಕೂಡ ಪಡೆಯಲಾಗಿದೆ. ರಾಜೀನಾಮೆ ಕೊಡು ಅಂತಾ ನಾವು ನಾಗೇಂದ್ರ ಅವರಿಗೆ ಹೇಳಿದ್ದೆವು. ಮುಡಾ ಹಗರಣದಲ್ಲಿ ಸಿಎಂ ಕೂಡಾ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಯಾರು ಸೈಟ್ ಕೊಟ್ಟವರು, ಕಮಿಟಿಯಲ್ಲಿ ಜಿ.ಟಿ.ದೇವೆಗೌಡ, ರಾಮದಾಸ್, ತನ್ವೀರ್ ಶೇಠ್ ಇದ್ರು. ಇವರ್ಯಾರು ಕಾಂಗ್ರೆಸ್ನವರು ಅಲ್ಲ. ಅದಕ್ಕೂ ಸಿದ್ದರಾಮಯ್ಯ ಕಮಿಟಿ ರಚನೆ ಮಾಡಿದ್ದಾರೆ. ವರದಿ ಬರಲಿ, ಅಕಸ್ಮಾತ್ ತಪ್ಪಿತಸ್ಥರಿದ್ದರೆ ಹೈಕಮಾಂಡ್ ಕ್ರಮ ಕೈಗೊಳ್ಳುತ್ತದೆ" ಎಂದರು.
ಇದನ್ನೂ ಓದಿ:ಸಿಎಂ ಬದಲಾವಣೆ ವಿಚಾರ: ಬೆಳಗಾವಿಯಲ್ಲಿ ಕೋಡಿಹಳ್ಳಿ ಶ್ರೀ ಹೇಳಿದ ಸ್ಫೋಟಕ ಭವಿಷ್ಯವೇನು? - Kodihalli Swamiji on CM Change