ಬೆಂಗಳೂರು: ಭಾರತದ ಇತಿಹಾಸದ ಪುಟಗಳನ್ನು ಗಮನಿಸಿದಾಗ ಕ್ಷಿಪಣಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಅನಾದಿ ಕಾಲದಿಂದಲೂ ಅನೇಕ ಉದಾಹರಣೆಗಳು ದೊರೆಯುತ್ತವೆ. ವಸಿಷ್ಠರ ಧನುರ್ವೇದ ಸಂಹಿತೆ ಪ್ರಾಚೀನ ಕಾಲಕ್ಕೆ ಸಂಬಂಧಿಸಿದಂತೆ ದೊರೆಯುವ ಒಂದು ಪ್ರಮುಖ ಆಕರ ಗ್ರಂಥವಾಗಿದೆ ಎಂದು ಲೇಖಕ, ಇತಿಹಾಸಕಾರ ಅಜಯ್ ಕುಮಾರ್ ಶರ್ಮ ಹೇಳಿದರು. ಭಾನುವಾರ ದಿ ಮಿಥಿಕ್ ಸೊಸೈಟಿಯು ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಭಾರತೀಯ ಕಬ್ಬಿಣದ ರಾಕೆಟ್ಗಳ ಇತಿಹಾಸ- 16 ರಿಂದ 19ನೇ ಶತಮಾನದವರೆಗಿನ ಸಂಪೂರ್ಣ ವ್ಯಾಖ್ಯಾನ’ ಎಂಬ ವಿಷಯ ಕುರಿತು ಅವರು ಮಾತನಾಡಿದರು.
2002ರಲ್ಲಿ ಶಿವಮೊಗ್ಗ ಜಿಲ್ಲೆಯ ಬಿದನೂರಿನಲ್ಲಿ ದೊರೆತ ಅಪಾರ ಪ್ರಮಾಣದ ಕಬ್ಬಿಣದ ತುಣುಕುಗಳು ಕೆಳದಿ ದೊರೆಗಳ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಕಬ್ಬಿಣದ ರಾಕೆಟ್ಗಳ ಇತಿಹಾಸವನ್ನು ತಿಳಿಸುತ್ತವೆ. ಅಹಮದ್ ನಗರದ ಸುಲ್ತಾನನಾಗಿದ್ದ ಮಲಿಕ್ ಅಂಬರ್ನ ರಾಜ್ಯದಲ್ಲಿ ಸುಧಾರಿತ ರಾಕೆಟ್ ತಂತ್ರಜ್ಞಾನದ ಬಳಕೆ ಅಸ್ತಿತ್ವದಲ್ಲಿದ್ದಿತು. ವಿಜಯನಗರ ಕಾಲದ ಐತಿಹಾಸಿಕ ದಾಖಲೆಗಳಲ್ಲಿ ಕಂಡುಬರುವ ಬಾಣ ಬಿರುಸು, ಅಗ್ನಿ ಬಾಣ ಮತ್ತು ಆಕಾಶ ಬಾಣ ಪದಗಳು ಈ ತಂತ್ರಜ್ಞಾನದ ಅಸ್ತಿತ್ವದ ಬಗ್ಗೆ ತಿಳಿಸುತ್ತದೆ ಎಂದರು.
ಇಕ್ಕೇರಿ ಮತ್ತು ಮೈಸೂರು ರಾಜ್ಯಗಳು ಸುಧಾರಿತವಾದ ರಾಕೆಟ್ ತಂತ್ರಜ್ಞಾನವನ್ನು ಆ ಕಾಲದಲ್ಲಿಯೇ ಹೊಂದಿದ್ದವು. ಕೆಳದಿ ದೊರೆಯಾದ ಬಸವ ಭೂಪಾಲನ ವಿಶ್ವಕೋಶ ಗ್ರಂಥವಾದ ‘ಶಿವತತ್ವ ರತ್ನಾಕರ’ ದಲ್ಲಿ ನಾಲೀಕಾ ಎಂಬ ಪದಗಳ ಬಳಕೆ ಲೋಹದ ರಾಕೆಟ್ ತಂತ್ರಜ್ಞಾನದ ಅಸ್ತಿತ್ವ ಕುರಿತು ತಿಳಿಸುತ್ತದೆ. ಮಧ್ಯಕಾಲೀನ ಕರ್ನಾಟಕವನ್ನು ಆಳಿದ ಅನೇಕ ಪಾಳೆಯಗಾರ ದೊರೆಗಳು ತಮ್ಮ ರಕ್ಷಣೆಗಾಗಿ ಈ ಯುದ್ಧ ತಂತ್ರಜ್ಞಾನವನ್ನು ಹೊಂದಿದ್ದರು. ಮರಾಠ ದೊರೆಗಳು ಸಹ ತಮ್ಮ ಯುದ್ಧ ನೀತಿಯ ಅಂಗವಾಗಿ ಈ ಮುಂದುವರೆದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದರು ಎಂದು ಮಾಹಿತಿ ನೀಡಿದರು.