ಚಿಕ್ಕಮಗಳೂರು: ದತ್ತಪೀಠದಲ್ಲಿ ತಾರಕ ಹೋಮ ನಡೆಸಲು ಅವಕಾಶ ನಿರಾಕರಿಸಿದ ಹಿನ್ನೆಲೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಅಯೋಧ್ಯೆ ಶ್ರೀರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನೆರವೇರುತ್ತಿದೆ. ಈ ಹಿನ್ನೆಲೆಯಲ್ಲಿ ದತ್ತಪೀಠದಲ್ಲಿ ಹೋಮ ಹವನಗಳನ್ನು ನಡೆಸಲು ಅವಕಾಶ ನೀಡಬೇಕೆಂದು ಕಾರ್ಯಕರ್ತರು ಆಗ್ರಹಿಸಿದರು.
ಸ್ಥಳಕ್ಕೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆಗಮಿಸಿ ಪ್ರತಿಭಟನಾನಿರತರ ಮನವೊಲಿಸಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಯಾವುದೇ ಕಾರಣಕ್ಕೂ ಈ ನಿರ್ಧಾರದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಪ್ರತಿಯೊಂದು ಮುಜರಾಯಿ ದೇವಾಲಯದಲ್ಲಿ ಇಂದು ವಿಶೇಷ ಪೂಜೆ ನಡೆಯುತ್ತಿದೆ. ಅದೇ ರೀತಿ ನಾವು ಹೋಮ ಮಾಡುತ್ತೇವೆ. ಅದಕ್ಕೆ ಅವಕಾಶ ಮಾಡಿ ಕೊಡಲೇಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಕುಳಿತರು. ಕೆಲವರು ಜಿಲ್ಲಾಧಿಕಾರಿ ಕಚೇರಿಗೂ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿದ್ದಾರೆ.
ಹಬ್ಬದ ವಾತಾವರಣ ಸಹಿಸದ ಕಾಂಗ್ರೆಸ್ ಸರ್ಕಾರ ರಜೆ ಕೊಡಲು ನಿರಾಕರಿಸಿದೆ - ಆರ್ ಅಶೋಕ್:ಮತ್ತೊಂದೆಡೆ, ತ್ರೇತಾ ಯುಗದಲ್ಲಿ ರಾವಣನಿಗೆ, ದ್ವಾಪರ ಯುಗದಲ್ಲಿ ದುರ್ಯೋಧನನಿಗೆ ಆದ ಗತಿಯೇ ಕಲಿಯುಗದ ರಾಮ ದ್ವೇಷಿಗಳಿಗೂ ಆಗಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಇಡೀ ಭಾರತ ದೇಶ ರಾಮಮಯವಾಗಿದೆ, ಜನರೆಲ್ಲರೂ ಸ್ವಯಂಪ್ರೇರಿತರಾಗಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಈ ಹಬ್ಬದ ವಾತಾವರಣವನ್ನು ಸಹಿಸದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ರಜೆ ಕೊಡಲು ನಿರಾಕರಿಸಿದೆ ಎಂದಿದ್ದಾರೆ.