ಕರ್ನಾಟಕ

karnataka

ETV Bharat / state

ಹೆರಿಗೆ, ಮಕ್ಕಳ ಆರೈಕೆ ಮಾಡಲು ನರ್ಸ್​ಗೆ ಹೆಚ್ಚುವರಿ ರಜೆ: ಸಿಎಟಿ ಆದೇಶ ಎತ್ತಿ ಹಿಡಿದ ಹೈಕೋರ್ಟ್

ಹೆರಿಗೆ ಮತ್ತು ಮಕ್ಕಳ ಆರೈಕೆ ರಜೆಗಾಗಿ ಮಹಿಳಾ ಉದ್ಯೋಗಿಗಳ ಹಕ್ಕುಗಳನ್ನು ಪರಿಗಣಿಸಬೇಕೆಂದು ನಿಮ್ಹಾನ್ಸ್​ಗೆ ಹೈಕೋರ್ಟ್ ಸೂಚಿಸಿದೆ.

ಹೈಕೋರ್ಟ್ High court CCL ಮಕ್ಕಳ ಆರೈಕೆ ರಜೆ
ಹೈಕೋರ್ಟ್ (ETV Bharat)

By ETV Bharat Karnataka Team

Published : 5 hours ago

ಬೆಂಗಳೂರು: ರಾಷ್ಟ್ರೀಯ ಮಾನಸಿಕ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಮಾದರಿ ಉದ್ಯೋಗದಾತರಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿರುವ ಹೈಕೋರ್ಟ್, ಹೆರಿಗೆ ಮತ್ತು ಮಕ್ಕಳ ಆರೈಕೆ ರಜೆಗಾಗಿ (ಸಿಸಿಎಲ್) ಮಹಿಳಾ ಉದ್ಯೋಗಿಗಳ ಹಕ್ಕುಗಳನ್ನು ಪರಿಗಣಿಸಬೇಕು ಎಂದು ಸೂಚನೆ ನೀಡಿದೆ.

ನಿಮ್ಹಾನ್ಸ್‌ನ ತುರ್ತು ನಿಗಾ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದ ಶುಶ್ರೂಷಕಿ ಅನಿತಾ ಜೋಸೆಫ್ ಎಂಬವರಿಗೆ 120 ದಿನಗಳ ಕಾಲ ಹೆಚ್ಚುವರಿ ಸಿಸಿಎಲ್‌ ಅನ್ನು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಮಂಜೂರು ಮಾಡಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ನಿಮ್ಹಾನ್ಸ್ ಹೈಕೋರ್ಟ್ ಮೆಟ್ಟಿಲೇರಿತ್ತು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ಪೀಠ, ನಿಮ್ಹಾನ್ಸ್​ನಲ್ಲಿ ಕೆಲಸ ಮಾಡುವ ಒಟ್ಟು 700 ಶುಶ್ರೂಷಕಿಯರಲ್ಲಿ ಒಬ್ಬರಿಗೆ 120 ದಿನಗಳ ಕಾಲ ಸಿಸಿಎಲ್ ಮಂಜೂರು ಮಾಡಿದಲ್ಲಿ ಯಾವುದೇ ರೀತಿಯ ಪ್ರತಿಕೂಲ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದು ತಿಳಿಸಿ, ನಿಮ್ಹಾನ್ಸ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.

ಅಲ್ಲದೆ, ರಜೆಯನ್ನು ತಿರಸ್ಕರಿಸಿರುವ ಹಕ್ಕು ಉದ್ಯೋಗದಾತರಿಗೆ ಇದ್ದರೂ, ಅದು ಸಂದರ್ಭಗಳನ್ನು ಅವಲಂಬಿಸುತ್ತದೆ ಮತ್ತು ಸಿಸಿಎಲ್‌ನ ಮಹತ್ವವನ್ನು ಕಡೆಗಣಿಸಲಾಗುವುದಿಲ್ಲ ಎಂದು ಪೀಠ ತಿಳಿಸಿದೆ.

ಮಗುವಿಗೆ ಎದೆ ಹಾಲುಣಿಸುವ ಮೂಲಭೂತ ಹಕ್ಕು ತಾಯಿಗಿದೆ ಎಂಬುದಾಗಿ ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ನಿಬಂಧನೆಗಳನ್ನು ಉಲ್ಲೇಖಿಸಿರುವ ಪೀಠ, ಬೆಳೆಯುತ್ತಿರುವ ಮಗುವಿನ ಹಿತದೃಷ್ಟಿಯಿಂದ ಏನು ಮಾಡಬೇಕು ಎಂಬ ನಿರ್ಧಾರವರನ್ನು ತೆಗೆದುಕೊಳ್ಳಲು ತಾಯಿಯ ತೀರ್ಮಾನವೇ ಅಂತಿಮ ಎಂದು ಹೇಳಿದೆ.

ಕೇಂದ್ರ ನಾಗರಿಕ ಸೇವೆಗಳ (ರಜೆ) ನಿಯಮಗಳ ಪ್ರಕಾರ ಸಿಸಿಎಲ್ ಅನ್ನು 45 ದಿನಗಳಿಗೆ ಸೀಮಿತಗೊಳಿಸಬೇಕು ಎಂಬ ನಿಯಮವಿಲ್ಲ. ಆದರೆ, ನಿಮ್ಹಾನ್ಸ್ ಹೊರಡಿಸಿದ ಮಾರ್ಗಸೂಚಿಗಳು ನಿಯಮಗಳಿಗೆ ವಿರುದ್ಧವಾಗಿವೆ ಎಂದು ತಿಳಿಸಿದ್ದ ನ್ಯಾಯಮಂಡಳಿ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಪ್ರಕರಣದ ಹಿನ್ನೆಲೆ: ಕೇರಳದ ಅನಿತಾ ಜೋಸೆಫ್ ನಿಮ್ಹಾನ್ಸ್​ನಲ್ಲಿ ಶುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಮಗುವಿನ ಆರೈಕೆಗಾಗಿ 180 ದಿನಗಳ ಕಾಲ ಸಿಸಿಎಲ್ ಮಂಜೂರು ಮಾಡಲಾಗಿತ್ತು. ಈ ರಜೆ ಪೂರ್ಣಗೊಳ್ಳುವ ಮುನ್ನವೇ ಅವರು, ತನ್ನ ಕುಟುಂಬದ ಸದಸ್ಯರ ಕೇರಳ ರಾಜ್ಯದಲ್ಲಿ ನೆಲೆಸಿದ್ದಾರೆ. ಪತಿ ಖಾಸಗಿ ಕಂಪೆನಿಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಗುವಿನ ಆರೈಕೆಯಾಗಿ ಹೆಚ್ಚುವರಿಯಾಗಿ 120 ದಿನಗಳ ಕಾಲ ಸಿಸಿಎಲ್ ಮಂಜೂರು ಮಾಡಬೇಕು ಎಂದು ಮನವಿ ಮಾಡಿದ್ದರು. ಈ ಮನವಿಯನ್ನು ನಿಮ್ಹಾನ್ಸ್ ಆಡಳಿತ ಮಂಡಳಿ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅನಿತಾ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೇಂದ್ರ ಆಡಳಿತ ಮಂಡಳಿ, ಅರ್ಜಿಯನ್ನು ಪುರಸ್ಕರಿಸಿ ಹೆಚ್ಚುವರಿ ರಜೆ ಮಂಜೂರಿಗೆ ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿ ನಿಮ್ಹಾನ್ಸ್ ಹೈಕೋರ್ಟ್ ಮೆಟ್ಟಿಲೇರಿತ್ತು.

ವಿಚಾರಣೆ ವೇಳೆ ನಿಮ್ಹಾನ್ಸ್ ಪರ ವಕೀಲರು, ನಿಮ್ಹಾನ್ಸ್‌ನ ಮಾರ್ಗಸೂಚಿಗಳ ಪ್ರಕಾರ ವರ್ಷದಲ್ಲಿ 45 ದಿನಗಳ ಕಾಲ ಮಾತ್ರ ಸಿಸಿಎಲ್ ಪಡೆಯುವುದಕ್ಕೆ ಅವಕಾಶವಿದೆ. ಅದಕ್ಕಿಂತ ಹೆಚ್ಚು ದಿನಗಳ ಕಾಲ ಸಿಸಿಎಲ್ ಪಡೆಯುವುದಕ್ಕೆ ಅವಕಾಶವಿಲ್ಲ. ಅಲ್ಲದೆ, ತೀರ್ವ ನಿಗಾ ಘಟಕ(ಐಸಿಯು)ದಲ್ಲಿ ಸೇವೆ ಸಲ್ಲಿಸುವ ಶುಶ್ರೂಷಕಿಯರ ಸಂಖ್ಯೆ ಕೊರತೆ ಇದೆ. ಈ ಕಾರಣದಿಂದ ಹೆಚ್ಚುವರಿ ರಜೆ ಮಂಜೂರು ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ವಾದ ಮಂಡಿಸಿದ್ದರು.

ಇದನ್ನೂ ಓದಿ:ಹೆರಿಗೆ ಸಮಯದಲ್ಲಿ ಮಕ್ಕಳಾಗದಿರುವ ಆಪರೇಷನ್ ಮಾಡಿದರೆ ಏನಾಗುತ್ತದೆ?: ಇಲ್ಲಿದೆ ಉತ್ತರ

ABOUT THE AUTHOR

...view details