ಬೆಂಗಳೂರು : ಉದ್ಯೋಗದ ಸ್ಥಳದಲ್ಲಿ ಜಾತಿ ತಾರತಮ್ಯ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ಪ್ರಾಧ್ಯಾಪಕರೊಬ್ಬರಿಗೆ ಅವಮಾನಿಸಿದ ಆರೋಪದಲ್ಲಿ ಬೆಂಗಳೂರಿನ ಭಾರತೀಯ ವ್ಯವಸ್ಥಾ ಪ್ರಬಂಧ ಸಂಸ್ಥೆ(ಐಐಎಂ-ಬಿ)ಯ ನಿರ್ದೇಶಕರು ಸೇರಿದಂತೆ ಐವರು ಅಧ್ಯಾಪಕರ ವಿರುದ್ಧ ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯ(ಡಿಸಿಆರ್‌ಇ)ನಡೆಸುತ್ತಿದ್ದ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್ ತಡೆ ನೀಡಿದೆ.
ಐಐಎಂಬಿ ನಿರ್ದೇಶಕ ರಿಷಿಕೇಶ್ ಟಿ ಕೃಷ್ಣನ್, ಡೀನ್ ದಿನೇಶ್ ಕುಮಾರ್, ಅಧ್ಯಾಪಕರಾದ ಶ್ರೀಲತಾ ಜೊನ್ನಲಗಡ್ಡ ರಾಹುಲ್ ಡೇ, ಆಶಿಸ್ ಮಿಶ್ರಾ ಮತ್ತು ಚೇತನ್ ಸುಬ್ರಹ್ಮಣಿಯನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡ ಅವರಿದ್ದ ನ್ಯಾಯಪೀಠ ಈ ಮಧ್ಯಂತರ ಆದೇಶ ನೀಡಿದೆ.
ಇದೇ ಪ್ರಕರಣದಲ್ಲಿ ಆರೋಪಿಯಾಗಿರುವ ಐಐಎಂ-ಬಿಯ ಆಡಳಿತ ಮಂಡಳಿಯ ಅಧ್ಯಕ್ಷ ಹೃದ್ರೋಗ ತಜ್ಞ ಡಾ. ದೇವಿಪ್ರಸಾದ್ ಶೆಟ್ಟಿ ಅವರ ವಿರುದ್ಧದ ವಿಚಾರಣೆಗೆ ಜುಲೈ 18 ರಂದು ತಡೆಯಾಜ್ಞೆ ನೀಡಿ ಆದೇಶಿಸಿತ್ತು.
ಅಕ್ರಮವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಜಾತಿ ಪ್ರಮಾಣ ಪತ್ರವನ್ನು ಪಡೆದು ವ್ಯಕ್ತಿಯನ್ನು ಕರ್ನಾಟಕ ಪರಿಶಿಷ್ಟ ಜಾತಿಗಳು, ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ, ಮೀಸಲಾತಿ ಇತರೆ) ನಿಯಮಗಳು 1992ರ ಸೆಕ್ಷನ್ 7(ಎ)ಅಡಿಯಲ್ಲಿ ಡಿಸಿಆರ್‌ಇ ವಿಚಾರಣೆಗೆ ಒಳಪಡಿಸಬಹುದಾಗಿದೆ. ಆದರೆ, ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ಕಿರುಕುಳ ನೀಡಿದ ಆರೋಪದ ಬಗ್ಗೆ ವಿಚಾರಣೆ ನಡೆಸುವುದಕ್ಕೆ ಅಧಿಕಾರವಿಲ್ಲ. ಹೀಗಾಗಿ ಎಸ್ಸಿ-ಎಸ್ಟಿಗೆ ಸೇರಿದ ವ್ಯಕ್ತಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಅರ್ಜಿದಾರರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಡಿಸಿಆರ್‌ಗೆ ಅಧಿಕಾರವಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣ ಹಿನ್ನೆಲೆ :ಐಐಎಂಬಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದ ಗೋಪಾಲ್ ದಾಸ್ ಅವರು ನೀಡಿದ ದೂರಿನ ಆಧಾರದಲ್ಲಿ ಡಿಸಿಆರ್‌ಇ ಅರ್ಜಿದಾರರ ವಿರುದ್ಧ ವಿಚಾರಣೆ ಪ್ರಾರಂಭಿಸಿತ್ತು. ಅರ್ಜಿದಾರರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಮತ್ತಿತರರ ವಿರುದ್ಧ ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಿತ್ತು.
ಅಲ್ಲದೆ, ದೂರುದಾರ ದಾಸ್ ಅವರನ್ನು ಅವಮಾನಿಸುವುದು ಮತ್ತು ನಿಂದಿಸುವುದು ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯಿದೆಯ ವಿವಿಧ ಸೆಕ್ಷನ್‌ಗಳು ಮತ್ತು ಬಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಕ್ರಿಮಿನಲ್ ಬೆದರಿಕೆ ಅಡಿಯಲ್ಲಿ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಕೃಷ್ಣನ್ ಸೇರಿ ಇತರೆ ಏಳು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ಗೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.
ಇದನ್ನೂ ಓದಿ :ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ ವೇತನ ಸ್ವಂತಕ್ಕೆ ಬಳಕೆ ಆರೋಪ: ಎಂಎಲ್‌ಸಿ ಶಶೀಲ್ ನಮೋಶಿಗೆ ನಿರೀಕ್ಷಣಾ ಜಾಮೀನು - ANTICIPATORY BAIL FOR MLC NAMOSHI