ಬೆಂಗಳೂರು:ಬೆಂಗಳೂರು ವಿಧಾನಸಭೆಯ ಮಾಜಿ ಉಪ ಸಭಾಧ್ಯಕ್ಷ ಹಾಗೂ ಚಿಂತಾಮಣಿ ಕ್ಷೇತ್ರದ ಮಾಜಿ ಜೆಡಿಎಸ್ ಶಾಸಕ ಎಂ.ಕೃಷ್ಣಾರೆಡ್ಡಿ ವಿರುದ್ಧದ ಮಾನನಷ್ಟ ಮೊಕದ್ದಮೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಹೂಡಿದ್ದ ಖಾಸಗಿ ದೂರು ಆಧರಿಸಿ ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದು ಕೋರಿ ಕೃಷ್ಣಾರೆಡ್ಡಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠ ಈ ಆದೇಶ ಮಾಡಿದೆ.
ಬನಶಂಕರಿಯ 2ನೇ ಹಂತದ ಭವಾನಿ ಹೌಸಿಂಗ್ ಕೋ ಆಪರೇಟಿವ್ ಸಂಸ್ಥೆ ಮತ್ತು ಇತರೆ 41 ಜನರು, ಕತ್ರಿಗುಪ್ಪೆಯ ಸರ್ವೇ ನಂ.125 ಮತ್ತು 126ಕ್ಕೆ ಸೇರಿದ ಅಂದಾಜು 350 ಕೋಟಿ ಮೌಲ್ಯದ 3 ಎಕರೆ 29 ಗುಂಟೆ ಸರ್ಕಾರದ ಜಾಗವನ್ನು ಕಬಳಿಸಲಾಗಿದೆ. ಆ ಬಗ್ಗೆ ಲೋಕಾಯುಕ್ತ ಕೋರ್ಟ್ ಮತ್ತು ಬಿಎಂಟಿಎಫ್‌ಗೆ ದೂರು ದಾಖಲಿಸಿದ್ದೆ. ಇದೇ ಪ್ರಕರಣ 2019ರಲ್ಲಿ ವಿಧಾನಸಭೆ ಸದನ ಸಮಿತಿ ಮುಂದೆ ಬಂದಿತ್ತು. ಅಂದಿನ ಸಮಿತಿ ಅಧ್ಯಕ್ಷರಾಗಿದ್ದ ಎಂ. ಕೃಷ್ಣಾರೆಡ್ಡಿ, ಬಿಬಿಬಿಎಂಪಿ ಕಾರ್ಯಪಾಲಕರನ್ನು ಕರೆಯಿಸಿ, ‘ವಿಚಾರವನ್ನು ಏಕೆ ದೊಡ್ಡದು ಮಾಡುತ್ತೀಯಾ; ಇಲ್ಲಿಗೆ ಬಿಟ್ಟು ಬಿಡು’ ಎಂದು ಒತ್ತಾಯ ಮಾಡಿದ್ದರು ಎಂಬುದಾಗಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೆ ಎಂದು ಎನ್ ಆರ್ ರಮೇಶ್ ತಿಳಿಸಿದ್ದರು.