ಬೆಂಗಳೂರು : ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ನಿಂದನಾತ್ಮಕ ಭಾಷಣ ಮಾಡಿರುವ ಆರೋಪದಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಶಾಸಕ ವೈ. ಭರತ್ ಶೆಟ್ಟಿ ಅವರ ವಿರುದ್ಧದ ಎಫ್ಐಆರ್‌ಗೆ ಹೈಕೋರ್ಟ್ ತಡೆ ನೀಡಿದೆ.
ಅಲ್ಲದೇ, ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.
ತಮ್ಮ ವಿರುದ್ಧದ ಪ್ರಕರಣ ರದ್ದುಕೋರಿ ಶಾಸಕ ಭರತ್ ಶೆಟ್ಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ನ್ಯಾಯಪೀಠ, ಪ್ರಕರಣದ ವಿಚಾರಣೆ ತಡೆ ನೀಡಿ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅರುಣ್ ಶ್ಯಾಮ್, ನಿರ್ದಿಷ್ಟ ಧರ್ಮದ ಸಂಬಂಧ ರಾಹುಲ್ ಗಾಂಧಿ ಸಂಸತ್‌ನಲ್ಲಿ ಹೇಳಿಕೆಗೆ ಪ್ರತಿಭಟನೆ ವೇಳೆ ಅವರ ವಿರುದ್ಧ ಮಾತನಾಡಿದ್ದಾರೆ. ಇದರಲ್ಲಿ ಅಪರಾಧ ವಾಗುವಂತಹ ರೀತಿಯಲ್ಲಿ ಮಾತನಾಡಿಲ್ಲ ಎಂದು ವಾದ ಮಂಡಿಸಿದ್ದರು. ಇದನ್ನು ದಾಖಲಿಸಿಕೊಂಡ ಪೀಠ, ಈ ರೀತಿಯ ಹೇಳಿಕೆಗಳನ್ನು ನೀಡದಂತೆ ಸೂಚನೆ ನೀಡಿತು. ಅಲ್ಲದೇ, ಪ್ರಕರಣಕ್ಕೆ ತಡೆ ನೀಡಿ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ :ಜುಲೈ 8ರ ಬೆಳಗ್ಗೆ ಕಾವೂರು ಜಂಕ್ಷನ್‌ನಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಭರತ್ ಶೆಟ್ಟಿ ಅವರು ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ಹೊರಹಾಕಬೇಕು, ಅವನು ಮಾತನಾಡುವ ಶೈಲಿ ನೋಡಿದರೆ ಹಿಂದೂ ಆದ ನಾನು ಲೋಕಸಭೆಗೆ ಹೋಗಿ ಅವರ ಕೆನ್ನೆಗೆ ಎರಡು ಹೊಡೆಯಬೇಕು ಎನಿಸುತ್ತದೆ. ಆಗ ಮಾತ್ರ ಆತನಿಗೆ ಬುದ್ದಿ ಬರುವುದು. ನಾನೊಬ್ಬ ಹಿಂದೂವಾಗಿದ್ದು, ಯಾರಾದರೂ ಹಿಂದೂ ವಿಚಾರದಲ್ಲಿ ಮಾತನಾಡಿದರೆ ಅವರಿಗೆ ತಕ್ಕ ಬುದ್ದಿ ಕಲಿಸಲು ನಾವೆಲ್ಲಾ ಒಂದಾಗಬೇಕು. ಅಗತ್ಯಬಿದ್ದರೆ ಶಸ್ತ್ರಾಸ್ತ್ರ ಹಿಡಿದು ಹೋರಾಟ ಮಾಡಲು ನಾವೆಲ್ಲಾ ಸಿದ್ಧರಾಗಬೇಕು ಎಂದು ಹೇಳಿದ್ದಾರೆ.
ಅಲ್ಲದೇ, ಬಿಜೆಪಿ ಕಾರ್ಯಕರ್ತರು ಮನಸ್ಸು ಮಾಡಿದರೆ ಕಾಂಗ್ರೆಸ್ ಅನ್ನು ನಾಶ ಮಾಡಲು ಸಿದ್ಧರಿದ್ದೇವೆ. ಹಿಂದುತ್ವದ ವಿಚಾರ ಮಾತನಾಡಿದರೆ ಶಸ್ತ್ರಾಸ್ತ್ರ ಉಪಯೋಗಿಸಿ ಯಾವುದೇ ಹೋರಾಟಕ್ಕೂ ಸಿದ್ಧರಿದ್ದೇವೆ. ನಮ್ಮ ಮೇಲೆ ಪ್ರಕರಣ ದಾಖಲಿಸಿದ ಮಾತ್ರಕ್ಕೆ ಹೆದರಲ್ಲ ಎಂದಿದ್ದರು.
ಈ ಸಂಬಂಧ ಮಂಗಳೂರಿನ ಅನಿಲ್ ಕುಮಾರ್ ಎಂಬುವರು ಕಾವೂರು ಠಾಣೆಯಲ್ಲಿ ದೂರು ನೀಡಿದ್ದರು. ಇದರ ಸಂಬಂಧ ಭರತ್ ಶೆಟ್ಟಿ ಮತ್ತಿತರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ವಿವಿಧ ಸೆಕ್ಷನ್‌ಗಳ ಅಡಿ ಎಫ್‌ಐಆರ್ ದಾಖಲಿಸಲಾಗಿತ್ತು. ಇದೇ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಿತ್ತು.
ಇದನ್ನೂ ಓದಿ :ರಾಹುಲ್ ಗಾಂಧಿ ಕೆನ್ನೆಗೆ ಹೊಡೆಯಬೇಕು ಹೇಳಿಕೆ: ಶಾಸಕ ಭರತ್ ಶೆಟ್ಟಿ ವಿರುದ್ಧ ಎಫ್ಐಆರ್ - FIR against MLA Bharat Shetty