ಕರ್ನಾಟಕ

karnataka

ETV Bharat / state

ಡಿಕೆಶಿ ಪ್ರಕರಣ: ಸಿಬಿಐ, ಯತ್ನಾಳ್ ಸಲ್ಲಿಸಿದ್ದ ಅರ್ಜಿಯ ತೀರ್ಪು ಕಾಯ್ದಿರಿಸಿದ ಹೈಕೋರ್ಟ್ - Disproportionate Assets Case

ಡಿ.ಕೆ.ಶಿವಕುಮಾರ್ ಪ್ರಕರಣ ಕುರಿತು ಸಿಬಿಐ, ಯತ್ನಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಪೂರ್ಣಗೊಳಿಸಿ, ತೀರ್ಪು ಕಾಯ್ದಿರಿಸಿದೆ.

ಡಿಕೆಶಿ ಪ್ರಕರಣ: ಸಿಬಿಐ, ಯತ್ನಾಳ್ ಸಲ್ಲಿಸಿದ್ದ ಅರ್ಜಿಯ ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಡಿಕೆಶಿ ಪ್ರಕರಣ: ಸಿಬಿಐ, ಯತ್ನಾಳ್ ಸಲ್ಲಿಸಿದ್ದ ಅರ್ಜಿಯ ತೀರ್ಪು ಕಾಯ್ದಿರಿಸಿದ ಹೈಕೋರ್ಟ್ (ETV Bharat)

By ETV Bharat Karnataka Team

Published : Aug 12, 2024, 5:53 PM IST

ಬೆಂಗಳೂರು:ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಲ್ಲಿ ಉಪ ಮುಖ್ಯಮಂತ್ರಿ ಹಾಗು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಇಂದು ಪೂರ್ಣಗೊಳಿಸಿದ್ದು, ತೀರ್ಪು ಕಾಯ್ದಿರಿಸಿತು.

ಸರ್ಕಾರದ ಕ್ರಮ ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ನ್ಯಾಯಮೂರ್ತಿ ಉಮೇಶ್ ಅಡಿಗ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರವಾಗಿ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಸಿಬಿಐ ಕೇಂದ್ರ ಸರ್ಕಾರದ ಒಂದು ಘಟಕ. ಅದು ಸ್ವತಂತ್ರ ಸಂಸ್ಥೆಯಲ್ಲ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅಡಿ ಬರುವ ಸಿಬಿಐಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡುತ್ತದೆ. ಕೇಂದ್ರ ಸರ್ಕಾರ ಸೂಕ್ತ ಪಕ್ಷಕಾರ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಕರ್ನಾಟಕ ಹೈಕೋರ್ಟ್​ನ ಏಕ ಸದಸ್ಯ ಪೀಠದ ಮುಂದೆ ಡಿ ಕೆ ಶಿವಕುಮಾರ್ ಅವರು ಎಫ್‌ಐಆರ್ ರದ್ದುಪಡಿಸುವಂತೆ ಕೋರಿದ್ದರು. ಆ ಪ್ರಕರಣದಲ್ಲಿ ಸಿಬಿಐ ಮತ್ತು ಶಿವಕುಮಾರ್ ಪಕ್ಷಕಾರರಾಗಿದ್ದರು. ಅಲ್ಲಿ ಸಿಬಿಐ ತನಿಖೆಗೆ ಅನುಮತಿ ನೀಡಿದ್ದು ಪ್ರಕರಣದ ವಿಚಾರವಾಗಿರಲಿಲ್ಲ ಎಂದರು.

ಈ ಪ್ರಕರಣದ ಸಂಬಂಧ ಸಿಬಿಐಗೆ ಅನುಮತಿ ನೀಡುವ ವಿಚಾರದಲ್ಲಿ ಸರ್ಕಾರ ವಂಚಿಸಿದೆ. ಹಿಂದಿನ ಬಿಜೆಪಿ ಸರ್ಕಾರ (ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ) ಮೌಖಿಕ ನಿರ್ದೇಶನದ ಮೂಲಕ ಸಿಬಿಐಗೆ ಅನುಮತಿಸಿತ್ತು. ಈಗ ಸರ್ಕಾರ ಬದಲಾಗಿದ್ದು, ನ್ಯಾಯಾಲಯದ ಮುಂದೆ ಬಂದಿದೆ ಎಂದು ತಿಳಿಸಿದರು.

ಡಿ ಕೆ ಶಿವಕುಮಾರ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಡಾ.ಅಭಿಷೇಕ್ ಮನು ಸಿಂಘ್ವಿ, ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆದಿರುವುದನ್ನು ಸಿಬಿಐ ಪ್ರಶ್ನಿಸಿದೆ. ಇಲ್ಲಿ ಸಿಬಿಐ ಮತ್ತು ರಾಜ್ಯ ಸರ್ಕಾರ ಪಕ್ಷಕಾರರು. ನಾನು ಖಾಸಗಿ ವ್ಯಕ್ತಿಯಾಗಿದ್ದೇನೆ. ಕೇಂದ್ರ ಸರ್ಕಾರದ ಪರ್ಯಾಯ ವ್ಯಕ್ತಿತ್ವದಂತೆ (ಆಲ್ಟರ್ ಇಗೊ) ಸಿಬಿಐ ವರ್ತಿಸುತ್ತದೆ. ಬೆಂಗಳೂರಿಗೆ ಹೋಗಬೇಕೆ ಅಥವಾ ಅಲ್ಲಿ ಯಾವ ರಸ್ತೆಗೆ ಹೋಗಬೇಕು ಎಂಬುದನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಸಾಮಾನ್ಯ/ವಿಶೇಷ ಒಪ್ಪಿಗೆ ವಿಚಾರವು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದೆ. ನಮ್ಮ ಪ್ರಕರಣದಲ್ಲಿ ಸಾಮಾನ್ಯ ಒಪ್ಪಿಗೆ ನೀಡಲಾಗಿಲ್ಲ, ನಿರ್ದಿಷ್ಟ ಒಪ್ಪಿಗೆ ನೀಡಲಾಗಿದೆ. ಇದು ಕಾನೂನುಬಾಹಿರ. ಈ ಪ್ರಕರಣವನ್ನು ರಾಜ್ಯ ಪೊಲೀಸರು ಅಥವಾ ಲೋಕಾಯುಕ್ತ ಏಕೆ ತನಿಖೆ ನಡೆಸಲಿಲ್ಲ. ಇನ್ನು ಸಿಬಿಐಗೆ ನೀಡಿರುವ ಅನುಮತಿ ಹಿಂಪಡೆದಿರುವುದಕ್ಕೂ ಸಿಬಿಐ ಎಫ್‌ಐಆರ್ ರದ್ದತಿ ಅರ್ಜಿ ವಜಾ ಮಾಡಿದ ಹೈಕೋರ್ಟ್​ನ ಏಕಸದಸ್ಯ ಪೀಠದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಸಿಬಿಐ ಪರವಾಗಿ ವಾದಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್, ರಾಜ್ಯ ಸರ್ಕಾರ ಸಿಬಿಐಗೆ ನೀಡಿರುವ ಅನುಮತಿ ಹಿಂಪಡೆದರೂ ಸಿಬಿಐ ಎಫ್‌ಐಆರ್ ಬಾಕಿ ಉಳಿಯಲಿದೆ. ಇದು ಪ್ರಮುಖ ವಿಚಾರವಾಗಿದೆ. ಇನ್ನು ಸಿಬಿಐ ಎಫ್‌ಐಆರ್ ಪ್ರಶ್ನಿಸಿ ಡಿ ಕೆ ಶಿವಕುಮಾರ್ ಸಲ್ಲಿಸಿದ್ದ ವಿಶೇಷ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ ಎಂದು ವಿವರಿಸಿದರು.

ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿನಿಧಿಸಿದ್ದ ವಕೀಲ ವೆಂಕಟೇಶ್ ದಳವಾಯಿ, ಒಮ್ಮೆ ಸಿಬಿಐ ತನಿಖೆಗೆ ಒಪ್ಪಿಗೆ ನೀಡಿ ಅದನ್ನು ಹಿಂಪಡೆದರೆ ತನಿಖೆ ಮೊಟಕಾಗಲಿದೆಯೇ ಎಂಬುದು ನ್ಯಾಯಾಲಯ ಮುಂದೆ ಇರುವ ಪ್ರಶ್ನೆ. ಭ್ರಷ್ಟಾಚಾರ ನಿರೋಧಕ ಕಾಯಿದೆ ಅಡಿ ಅಪರಾಧದ ತನಿಖೆ ನಡೆಸುವ ಸಿಬಿಐ ಸಂಪೂರ್ಣ ಸ್ವತಂತ್ರವಾಗಿರುತ್ತದೆ. ಇಲ್ಲಿ ಅರ್ಜಿದಾರರಿಗೆ ಸಂವಿಧಾನದ 131ನೇ ವಿಧಿ ಅನ್ವಯಿಸುವುದು ಊರ್ಜಿತವಾಗುವುದಿಲ್ಲ. ಒಮ್ಮೆ ಸಿಬಿಐ ಪ್ರಕರಣ ದಾಖಲಿಸಿದ ಮೇಲೆ ಅದು ತಾರ್ಕಿಕ ಅಂತ್ಯ ಕಾಣಬೇಕು. ಸಿಬಿಐ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ವಜಾ ಮಾಡಬೇಕು. ಇದರಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ಪಾತ್ರ ಇರುವುದಿಲ್ಲ ಎಂದರು

ಪ್ರಕರಣದ ಹಿನ್ನೆಲೆ:ಡಿ.ಕೆ.ಶಿವಕುಮಾರ್ ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್ ಉದ್ಯಮ ಸೇರಿದಂತೆ ಹಲವು ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದಾರೆ. ದೆಹಲಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಡಿಕೆಶಿಗೆ ಸೇರಿದ ಆಸ್ತಿಗಳಲ್ಲಿ 2017ರ ಆಗಸ್ಟ್ 2ರಂದು ಆದಾಯ ತೆರಿಗೆ ಇಲಾಖೆ ಶೋಧ ನಡೆಸಿತ್ತು. ಈ ವೇಳೆ 8.59 ಕೋಟಿ ರೂಪಾಯಿ ಹಣ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ನಂತರ ಜಾರಿ ನಿರ್ದೇಶನಾಲಯ ಡೆಕಿಶಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ಪ್ರಕರಣ ದಾಖಲಿಸಿತ್ತು. ಇದನ್ನು ಆಧರಿಸಿ 2019ರ ಸೆಪ್ಟೆಂಬರ್ 3ರಂದು ಶಿವಕುಮಾರ್ ಅವರನ್ನು ಬಂಧಿಸಲಾಗಿತ್ತು. 2019ರ ಸೆಪ್ಟೆಂಬರ್ 9ರಂದು ಜಾರಿ ನಿರ್ದೇಶನಾಲಯದ ಪತ್ರ ಆಧರಿಸಿ, ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ತನಿಖೆ ನಡೆಸಲು ಸಿಬಿಐಗೆ ರಾಜ್ಯ ಸರ್ಕಾರವು ಅನುಮತಿ ನೀಡಿತ್ತು.

ಇದನ್ನೂ ಓದಿ: ಕುಮಾರಸ್ವಾಮಿ ಒಬ್ಬರೇ ಗಂಡಸು, ಮಗನ ಸೋಲಿನ ನಂತರ ಅವರ ಮಾತು ಮಿತಿ ಮೀರಿದೆ: ಡಿಕೆಶಿ - D K Shivakumar

ABOUT THE AUTHOR

...view details