ಕರ್ನಾಟಕ

karnataka

By ETV Bharat Karnataka Team

Published : Jan 30, 2024, 6:37 AM IST

ETV Bharat / state

ಆಸ್ತಿ‌ ವಿವರ ಮುಚ್ಚಿಟ್ಟ ಆರೋಪ: ಹ್ಯಾರಿಸ್ ಮಧ್ಯಂತರ ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ವಿರುದ್ಧ ಆಸ್ತಿ ವಿವರ ಮುಚ್ಚಿಟ್ಟ ಆರೋಪವಿದೆ. ಈ ಸಂಬಂಧ ಹೈಕೋರ್ಟ್‌ ವಿಚಾರಣೆ ಮುಗಿಸಿದ್ದು, ತೀರ್ಪು ಕಾಯ್ದಿರಿಸಿದೆ.

ಶಾಸಕ ಎನ್.ಎ ಹ್ಯಾರಿಸ್
ಶಾಸಕ ಎನ್.ಎ ಹ್ಯಾರಿಸ್

ಬೆಂಗಳೂರು:ಆಸ್ತಿ ವಿವರ ಮುಚ್ಚಿಟ್ಟಿರುವುದು ಚುನಾವಣೆಗೆ ಹೇಗೆ ಅಡ್ಡಿಯಾಗುತ್ತದೆ ಎಂಬುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿಲ್ಲ ಎಂದು ಆಕ್ಷೇಪಿಸಿ ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್​.ಎ.ಹ್ಯಾರಿಸ್ ಸಲ್ಲಿಸಿರುವ ಮಧ್ಯಂತರ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.

ಚುನಾವಣೆ ವೇಳೆ ಸಲ್ಲಿಸಲಾದ ಫಾರಂ ನಂ.26ರಲ್ಲಿ ಹ್ಯಾರಿಸ್ ಅವರು ತಮ್ಮ ಆಸ್ತಿ ವಿವರಗಳನ್ನು ಸರಿಯಾಗಿ ಘೋಷಿಸಿಲ್ಲ. ಹೀಗಾಗಿ, ಅವರನ್ನು ಅನರ್ಹಗೊಳಿಸಿ ತಮ್ಮನ್ನು ವಿಜೇತ ಎಂದು ಘೋಷಿಸುವಂತೆ ಪರಾಜಿತ ಬಿಜೆಪಿ ಅಭ್ಯರ್ಥಿ ಕೆ.ಶಿವಕುಮಾರ್ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಆಕ್ಷೇಪಿಸಿ ಹ್ಯಾರಿಸ್ ಸಲ್ಲಿಸಿರುವ ಮಧ್ಯಂತರ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನೇತೃತ್ವದ ಏಕಸದಸ್ಯ ಪೀಠ ಪೂರ್ಣಗೊಳಿಸಿದೆ.

ವಿಚಾರಣೆಯಲ್ಲಿ ಹ್ಯಾರಿಸ್ ಪರ ವಾದಿಸಿದ ಹಿರಿಯ ವಕೀಲರು, ಆಸ್ತಿಯ ವಿಚಾರವನ್ನು ಮುಚ್ಚಿಟ್ಟಿದ್ದಾರೆ ಎಂದು ಆಕ್ಷೇಪಿಸಿ ಅರ್ಜಿ ಸಲ್ಲಿಸಲಾಗಿದೆ. ಆದರೆ, ಇದು ಹೇಗೆ ಚುನಾವಣೆಗೆ ಅಡ್ಡಿಪಡಿಸುತ್ತದೆ ಎಂಬುದನ್ನು ಅರ್ಜಿಯಲ್ಲಿ ಉಲ್ಲೇಖಿಸಿಲ್ಲ. ಹೀಗಾಗಿ, ಚುನಾವಣಾ ಅರ್ಜಿ ಊರ್ಜಿತವಾಗುವುದಿಲ್ಲ ಎಂದರು.

ಅರ್ಜಿದಾರರ ಪರ ವಕೀಲರು, ಆಸ್ತಿ ವಿವರ ಮುಚ್ಚಿಟ್ಟಿರುವುದು ನಿಜವಾದರೆ ಅದನ್ನು ಸಾಬೀತುಪಡಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಚುನಾವಣಾಧಿಕಾರಿ ಉಮೇದುವಾರಿಕೆ ಸ್ವೀಕರಿಸಿದ್ದೇ ತಪ್ಪಾಗಲಿದೆ ಎಂಬುದರ ಕುರಿತು ಸುಪ್ರೀಂ ಕೋರ್ಟ್ ತೀರ್ಪಿದೆ. ಉಮೇದುವಾರಿಕೆ ಪರಿಶೀಲಿಸಿ ಚುನಾವಣಾಧಿಕಾರಿ ನಾಮಪತ್ರ ಸ್ವೀಕರಿಸಬೇಕಿತ್ತು ಎಂದು ತಿಳಿಸಿದರು.

ಹ್ಯಾರಿಸ್ ಮಧ್ಯಂತರ ಅರ್ಜಿಯನ್ನು ನ್ಯಾಯಾಲಯವು ಪುರಸ್ಕರಿಸಿದರೆ ಶಿವಕುಮಾರ್ ಸಲ್ಲಿಸಿರುವ ಚುನಾವಣಾ ಅರ್ಜಿ ಅಮಾನ್ಯವಾಗಲಿದೆ. ಒಂದೊಮ್ಮೆ ಹ್ಯಾರಿಸ್ ಅವರ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದರೆ ಚುನಾವಣಾ ಅರ್ಜಿಯ ವಿಚಾರಣೆ ಮುಂದುವರಿಯಲಿದೆ.

ಪ್ರಕರಣದ ಹಿನ್ನೆಲೆ: 2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶಾಸಕ ಎನ್.ಎ.ಹ್ಯಾರಿಸ್ ತಮ್ಮ ಚರ ಮತ್ತು ಸ್ಥಿರಾಸ್ತಿಗಳ ಮಾಹಿತಿಯನ್ನು ಸಮರ್ಪಕವಾಗಿ ಒದಗಿಸಿಲ್ಲ. ಸುಳ್ಳು ಘೋಷಣೆಯ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಚರ ಮತ್ತು ಸ್ಥಿರಾಸ್ತಿಗಳನ್ನು ವಾಸ್ತವಕ್ಕಿಂತಲೂ ಕಡಿಮೆ ಅಂದಾಜಿನಲ್ಲಿ ದಾಖಲಿಸಿದ್ದಾರೆ. ಹೀಗಾಗಿ, ಈ ನಾಮಪತ್ರ ಸ್ವೀಕರಿಸಿರುವುದರಿಂದ ಅದು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಉಂಟು ಮಾಡಿದ್ದು ಅವರನ್ನು ಅನರ್ಹಗೊಳಿಸಬೇಕು ಎಂದು ಅರ್ಜಿದಾರ ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ:ದ್ವಿಚಕ್ರ ವಾಹನದಲ್ಲಿ ಹೆಚ್ಚು ಜನ ಪ್ರಯಾಣಿಸಿ ಅಪಘಾತಕ್ಕೀಡಾದರೆ ಸವಾರನ ನಿರ್ಲಕ್ಷ್ಯವೂ ಕಾರಣ: ಹೈಕೋರ್ಟ್

ABOUT THE AUTHOR

...view details